LATEST NEWS
ದೇಶ ರಕ್ಷಣೆಯ ಹೊಣೆ ಹೊತ್ತವರ ಕಂದನಿಗಿದೆಯೇ ರಕ್ಷಣೆ ?
ದೇಶ ರಕ್ಷಣೆಯ ಹೊಣೆ ಹೊತ್ತವರ ಕಂದನಿಗಿದೆಯೇ ರಕ್ಷಣೆ ?
ಪುತ್ತೂರು ಜುಲೈ 5: ಪುಟ್ಟ ಬಾಲಕಿಯೊಂದು ಪೋಲೀಸ್ ಸಿಬ್ಬಂದಿಯಾಗಿರುವ ತನ್ನ ತಾಯಿಯೊಂದಿಗೆ ಟ್ರಾಫಿಕ್ ಗೂಡಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ಚಿತ್ರೀಕರಿಸಲಾಗಿದ್ದು, ಸುಳ್ಯ ಪೋಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯಾಗಿರುವ ಯೋಗಿತ ಈ ವಿಡಿಯೋದಲ್ಲಿ ಮಳೆಯಲ್ಲಿ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದರೆ, ಮಗಳು ಚಳಿಯಲ್ಲಿ ಟ್ರಾಫಿಕ್ ಗೂಡಿನಲ್ಲಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಹಾಗೂ ಮಗುವಿನ ಅವಸ್ಥೆಯ ಬಗ್ಗೆ ಹಾಗೂ ಇಲಾಖೆಯ ನಿರ್ಲಕ್ಷ್ಯ ದ ಬಗ್ಗೆ ತಿಳಿಸಲಾಗಿತ್ತು.
ಮಹಿಳಾ ಪೊಲೀಸ್ ಸಿಬ್ಬಂದಿಯಾಗಿರುವ ಯೋಗಿತಾ ಅವರ ಪತಿ ಕಿಶೋರ್ ಮಾವಾಜೆ ಭಾರತೀಯ ಸೇನೆಯ ಮಿಲಿಟರಿ ಇಂಜಿನಿಯರಿಂಗ್ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಯೋಗಿತಾ ಅವರ ಗಂಡನ ಮನೆ ಹಾಗೂ ತವರು ಮನೆ ಸುಳ್ಯ ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಈ ಕಾರಣಕ್ಕಾಗಿ ಶಾಲೆಯ ಅವಧಿ ಮುಗಿದ ಬಳಿಕ ಮಗಳು ಆರಾಧ್ಯ ತಾಯಿ ಜೊತೆಗೇ ಇರುತ್ತಿದ್ದಳು.
ವಿಡಿಯೋ ಚಿತ್ರೀಕರಿಸಿದ ಹತ್ತು ದಿನಗಳ ಹಿಂದೆ ಯೋಗಿತಾ ಅವರನ್ನು ಟ್ರಾಫಿಕ್ ಡ್ಯೂಟಿಗೆ ಹಾಕಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿ ಜಾಲತಾಣದಲ್ಲಿ ಪೋಲೀಸ್ ವ್ಯವಸ್ಥೆಯ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಯೋಗಿತಾ ಅವರನ್ನು ಮತ್ತೆ ಠಾಣೆಯ ಕೆಲಸಕ್ಕೆ ನಿಯೋಜಿಸಲಾಗಿದೆ.
ಯೋಗಿತಾ ಇದೀಗ ವಾಸಿಸುತ್ತಿರುವ ಪೋಲೀಸ್ ವಸತಿಗೃಹದ ಪಕ್ಕದಲ್ಲಿದ್ದ ಪೋಲೀಸ್ ಎ.ಎಸ್.ಐ ಆಕೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ನಡುವೆ ಪೇದೆಯ ವಿರುದ್ಧ ಯೋಗಿತಾ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರನ್ನೂ ನೀಡಿದ್ದರು. ಸುಳ್ಯ ಠಾಣೆಯ ಅಧಿಕಾರಿಗಳು ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾರಣಕ್ಕಾಗಿ ಯೋಗಿತಾ ಒಂದು ತಿಂಗಳ ಮೆಡಿಕಲ್ ಲೀವ್ ಹಾಕಿ ಮನೆಯಲ್ಲೇ ಇದ್ದರು.
ಈ ನಡುವೆ ಆಕೆಯ ಪತಿ ಯೋಧ ಗಣೇಶ್ ಮಾವಂಜೆ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದ ಬಳಿಕ ಆರೋಪಿ ಎ.ಎಸ್.ಐ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಈ ನಡುವೆ ರಜೆ ಮುಗಿಸಿ ಜೂನ್ 17 ಕ್ಕೆ ಮತ್ತೆ ಡ್ಯೂಟಿಗೆ ಜಾಯಿನ್ ಆದ ಯೋಗಿತಾ ಅವರನ್ನು ಸುಳ್ಯ ನಗರ ಠಾಣೆಯ ಅಧಿಕಾರಿ ಟ್ರಾಫಿಕ್ ಡ್ಯೂಟಿಗೆ ಹಾಕಿದ್ದರು.