Connect with us

    LATEST NEWS

    ಪತ್ನಿ ಹಾಗೂ ಮಗುವನ್ನು ಗ್ಲಾಸ್ ಚೂರಿನಿಂದ ತಿವಿದು ಕೊಲೆ ಮಾಡಿದ್ದ ಕಾರ್ತಿಕ್ – ಮನೆಯಲ್ಲಿತ್ತು ಡೆತ್ ನೋಟ್

    ಮುಲ್ಕಿ ನವೆಂಬರ್ 09: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದ ಭೀಕರ ಕೊಲೆ ಪ್ರಕರಣದ ಕುರಿತಂತೆ ಮಂಗಳೂರು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದು, ಕಾರ್ತಿಕ್ ತನ್ನ ಹೆಂಡತಿ ಮತ್ತು ಮಗುವನ್ನು ಗ್ಲಾಸ್ ಚೂರಿನಿಂದ ತಿವಿದು ಕೊಲೆ ಮಾಡಿ ಬಳಿಕ ತಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


    ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಶುಕ್ರವಾರ ಮಧ್ಯಾಹ್ನ ಮುಲ್ಕಿ ಬಳಿಯ ಬೆಳ್ಳಾಯರು ಎಂಬಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಪುಡಿ ಪುಡಿಯಾಗಿದ್ದು, ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಮುಲ್ಕಿ ಪೊಲೀಸರಿಗೆ ಲಭಿಸಿತ್ತು. ಯುವಕನ ದೇಹ ಛಿದ್ರಗೊಂಡಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಮುಲ್ಕಿಯ ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದರು. ಯುವಕನ ಮೃತದೇಹ ಸಿಕ್ಕಿದ ತುಸು ದೂರದಲ್ಲೇ ಬೈಕ್ ಒಂದು ಪತ್ತೆಯಾಗಿತ್ತು. ಆತನ ದೇಹದಲ್ಲಿ ಬೇರಾವುದೇ ಗುರುತು ಪತ್ರಗಳಿರಲಿಲ್ಲ. ಶನಿವಾರ ಬೆಳಗ್ಗೆ ಸ್ಥಳದಲ್ಲಿ ಬೈಕ್ ಕೀ ಸಿಕ್ಕಿದ್ದು ಬೈಕನ್ನು ಚೆಕ್ ಮಾಡಿದಾಗ, ಅದರಲ್ಲಿ ಆರ್ ಸಿ ಕಾರ್ಡ್ ಸಿಕ್ಕಿದ್ದರಿಂದ ಪಕ್ಷಿಕೆರೆಯ ವಿಳಾಸ ತೋರಿಸಿತ್ತು. ಪಕ್ಷಿಕೆರೆಯಲ್ಲಿ ಜನಾರ್ದನ ಭಟ್ ಹೊಟೇಲ್ ನಡೆಸುತ್ತಿದ್ದು, ಜನಾನುರಾಗಿ ವ್ಯಕ್ತಿಯಾಗಿದ್ದರು. ಅವರ ಮಗನೇ ಮೃತಪಟ್ಟ ಕಾರ್ತಿಕ್ ಎಂದು ತಿಳಿದು ಪೊಲೀಸರು ಅವರ ಬಳಿಗೆ ತೆರಳಿದ್ದರು.


    ಮಧ್ಯಾಹ್ನ 1.30ರ ಸುಮಾರಿಗೆ ಪೊಲೀಸರು ಜನಾರ್ದನ ಭಟ್ ಅವರ ಹೊಟೇಲಿಗೆ ತೆರಳಿ, ಕಾರ್ತಿಕ್ ಬಗ್ಗೆ ಕೇಳಿದಾಗ ನಿನ್ನೆ ಬೆಳಗ್ಗೆ ಮನೆಯಲ್ಲಿದ್ದರು. ಸಂಜೆ ಬಾಗಿಲು ಹಾಕ್ಕೊಂಡಿತ್ತು. ಇವತ್ತು ಬೆಳಗ್ಗೆ ಕಾಣಿಸಿರಲಿಲ್ಲ. ನಾವು ಬೆಳಗ್ಗೆಯೇ ಹೊಟೇಲಿಗೆ ಬಂದಿದ್ದವು ಎಂದು ತಿಳಿಸಿದ್ದಾರೆ. ಫೋನ್ ಮಾಡಿದರೆ ಮಗ ಮತ್ತು ಸೊಸೆಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ಮನೆಗೆ ತೆರಳಿ, ಅವರಿದ್ದ ಕೋಣೆಯ ಬಾಗಿಲು ಒಡೆದು ನೋಡಿದಾಗ ಬೆಡ್ ನಲ್ಲಿ ಮಗು ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿತ್ತು. ಅಲ್ಲಿಯೇ ಕೆಳಗಡೆ ಸೊಸೆ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ. ಕಾರ್ತಿಕನ ವೃದ್ಧ ತಂದೆ, ತಾಯಿ ಅದೇ ಮನೆಯಲ್ಲಿ ನಿನ್ನೆ ರಾತ್ರಿ ಕಳೆದಿದ್ದರೂ, ಮನೆಯಲ್ಲಿ ಸೊಸೆ, ಮಗು ಮೃತಪಟ್ಟಿರುವುದು ಅವರ ಗಮನಕ್ಕೆ ಬಂದಿರಲಿಲ್ಲ.


    ಒಂದೇ ಮನೆಯಲ್ಲಿದ್ದರೂ ಮಗ, ಸೊಸೆ, ದಿನವೂ ಹೊಟೇಲೇ ತಮ್ಮ ಜಗತ್ತು ಅಂದ್ಕೊಂಡಿದ್ದ ಜನಾರ್ದನ ಭಟ್ ಮತ್ತು ಶ್ಯಾಮಲಾ ಜೊತೆಗೆ ಮಾತುಕತೆ ಇರಲಿಲ್ಲ. ಹೀಗಾಗಿ ಕೆಲವೊಮ್ಮೆ ಮಗ, ಸೊಸೆ ಮನೆಯಿಂದ ಹೊರಗೆ ಹೋಗುತ್ತಿದ್ದರೂ, ತಡವಾಗಿ ಮನೆಗೆ ಬರುತ್ತಿದ್ದರೂ, ಇವರು ಚಿಂತೆ ಮಾಡುತ್ತಿರಲಿಲ್ಲ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ (ನ.8) ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿ ಮತ್ತು ಮಗುವನ್ನು ಗ್ಲಾಸಿನ ಚೂರಿನಿಂದ ತಿವಿದು ಹತ್ಯೆ ಮಾಡಲಾಗಿದೆ. ಅಲ್ಲದೆ, ಮನೆಯ ಕೋಣೆಯಲ್ಲಿ ಸೀರೆಯನ್ನು ಬಿಗಿದ ರೀತಿ ಕಂಡುಬಂದಿದ್ದು, ಕಾರ್ತಿಕ್ ಅದರಲ್ಲಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎನ್ನುವ ಸಂಶಯ ವ್ಯಕ್ತವಾಗಿದೆ. ಅಲ್ಲದೆ, ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸುದೀರ್ಘ ಡೆತ್ ನೋಟ್ ಇದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆದಿಟ್ಟಿದ್ದಾನೆ.

    ತಮ್ಮ ಶವಗಳನ್ನು ಪತ್ನಿಯ ತಂದೆ, ತಾಯಿಗೆ ನೀಡುವಂತೆ ಹೇಳಿದ್ದು, ತಂದೆ, ತಾಯಿ ತಮ್ಮ ಅಂತ್ಯ ಸಂಸ್ಕಾರ ಮಾಡಬಾರದು ಎಂದು ಬರೆದಿಟ್ಟಿದ್ದಾನೆ. ಅಲ್ಲದೆ, ತನಗೆ ಸೇರಬೇಕಾದ ಆಸ್ತಿಯ ವಿಚಾರವನ್ನೂ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಬರೆಯಲಾಗಿದೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬುದನ್ನೂ ಬರೆಯಲಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರಾಗಿದ್ದು, ಆಕೆಯ ಹೆತ್ತವರು ಬಂದ ಬಳಿಕವೇ ಪೋಸ್ಟ್ ಮಾರ್ಟಂ ನಡೆಸಲಾಗುವುದು ಎಂದು ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply