LATEST NEWS
ಅನುಶ್ರೀ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ -ಮಂಗಳೂರು ಪೊಲೀಸ್ ಆಯುಕ್ತ
ಮಂಗಳೂರು ಸೆಪ್ಟೆಂಬರ್ 08: ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಹೆಸರನ್ನು ಕೈಬಿಟ್ಟಿರುವುದಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಿರೂಪಕಿ ಅನುಶ್ರೀ ವಿರುದ್ದ ಯಾವುದೇ ಸಾಕ್ಷಿಗಳಿಲ್ಲದ ಕಾರಣ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿ ಕಿಶೋರ್ ಅಮನ್ ಶೆಟ್ಟಿ ಚಾರ್ಜ್ ಶೀಟ್ ನಲ್ಲಿರುವ ಹೇಳಿಕೆಗಳನ್ನು ನನ್ನದಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಚಾರ್ಜ್ ಶೀಟ್ಸಲ್ಲಿಕೆ ವಿಚಾರವಾಗಿ ಯಾವುದೇ ಆರೋಪಗಳಿದ್ದರೆ ವಕೀಲರ ಮೂಲಕ ಕೋರ್ಟ್ ಗೆ ಹೇಳಬಹುದು ಎಂದಿದ್ದಾರೆ.
ಆ ಕೇಸ್‌ನ ಸ್ಟೇಟಸ್ ಬಗ್ಗೆ ಮಾಹಿತಿ ಪಡೆದಿದ್ದೇನೆ. ಚಾರ್ಜ್ ಶೀಟ್ ಪ್ರಕರಣದ ಅಂತಿಮ ವರದಿಯಾಗಿರುತ್ತದೆ. ಅದು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಟ್ರಯಲ್ ನಡೆಯುತ್ತಿದೆ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇಲ್ಲ” ಎಂದು ಹೇಳಿದ್ದಾರೆ.
ಒಂಭತ್ತು ತಿಂಗಳ ಹಿಂದೆಯೇ ಅಂತಿಮ ವರದಿ ಸಲ್ಲಿಸಿದ್ದೇವೆ. ಈಗ ಯಾಕೆ ಈ ವಿಚಾರ ಸುದ್ದಿಯಾಯಿತು ಗೊತ್ತಿಲ್ಲ ಎಂದಿದ್ದಾರೆ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ. ಆರು ಜನ ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಿದ್ದೇವೆ. ಐದು ಜನ ಆರೋಪಿಗಳಿಗೆ ಜಾಮೀನು ಆಗಿದ್ದು, ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. 2020 ರ ಸೆಪ್ಟೆಂಬರ್ 19 ಕ್ಕೆ ಪ್ರಕರಣ ದಾಖಲಾಗಿತ್ತು. ಅದೇ ವರ್ಷ ಡಿಸೆಂಬರ್ 11 ಕ್ಕೆ ಅಂತಿಮ ವರದಿ ಸಲ್ಲಿಸಿದ್ದೇವೆ ಎಂದು ವಿವರಿಸಿದ್ದಾರೆ.