Connect with us

    LATEST NEWS

    ಶಾಲಾ ವಾಹನ ಚಾಲಕರ ಜೊತೆ ಮಂಗಳೂರು ಪೊಲೀಸ್ ಆಯುಕ್ತರ ಸಭೆ

    ಮಂಗಳೂರು ಜೂನ್ 08: ನಗರದ ಪ್ರಮುಖ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾದ್ಯಾಯರು, ಮುಖ್ಯಸ್ಥರು, ಶಾಲೆಗಳ ಮಕ್ಕಳ ಸುರಕ್ಷತಾ ಸಮಿತಿಯ ಸದಸ್ಯರು ಮತ್ತು ಶಾಲಾ ವಾಹನ ಚಾಲಕರ ಸಭೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ನಡೆದಿದೆ.


    ಈ ಸಭೆಯಲ್ಲಿ ಶಾಲಾ ವಾಹನಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಮೋಟಾರು ವಾಹನಗಳು (ಶಾಲಾ ಮಕ್ಕಳನ್ನು ಕರೆದ್ಯೊಯ್ಯುವ ವಾಹನಗಳ ಸ್ಥಿತಿಗತಿ) ನಿಯಮಗಳು-2012 [Karnataka Motor Vehicles (Conditions for Vehicles engaged in transport of school children) Rules-2012] ರಲ್ಲಿ ಸೂಚಿಸಿರುವ ನಿಬಂಧನೆಗಳನ್ನು ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ತಿಳಿಸಿ, ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಪಾಲನಾ ವರದಿ ನೀಡುವಂತೆ ಸೂಚಿಸಲಾಯಿತು.


    ಶಾಲಾ ಕಾಲೇಜುಗಳು ಪ್ರಾರಂಭಗೊಳ್ಳುವ ಹಾಗೂ ಬಿಡುವ ಸಮಯದಲ್ಲಿ ರಸ್ತೆಗಳಲ್ಲಿ ಆಗುವ ವಾಹನ ದಟ್ಟಣೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ, ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ವಾಹನಗಳನ್ನು ನಿಲ್ಲಿಸಲು ಹಾಗೂ ವಿದ್ಯಾರ್ಥಿಗಳನ್ನು ಇಳಿಸಲು ಅಥವಾ ಹತ್ತಿಸಲು ಶಾಲಾ ಕಾಲೇಜುಗಳ ಆವರಣದೊಳಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ, ವಾಹನ ಪಾರ್ಕಿಂಗ್ ಸ್ಥಳಾವಕಾಶ ಇಲ್ಲದೇ ಇರುವ ಶಾಲೆಗಳು ಅತೀ ಶೀಘ್ರವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುವಂತೆ, ಶಾಲಾ/ಕಾಲೇಜಿಗೆ ಬರುವ ವಿದ್ಯಾರ್ಥಿಗಳು/ ಅವರನ್ನು ಕರೆತರುವ ಪೋಷಕರು ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ, ಈ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿ, ಶಾಲಾ ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚಿಸಲಾಯಿತು.

    ಶಾಲಾ ವಾಹನಗಳಲ್ಲಿ ಹಾಗೂ ವಿದ್ಯಾರ್ಥಿಗಳು ಬರುವ ಇತರೆ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸದಂತೆ, ವಾಹನಗಳಲ್ಲಿ ಕರ್ಕಶ ಹಾರ್ನ್‌ಗಳನ್ನು ಬಳಸದಂತೆ ಸೂಕ್ತ ಸೂಚನೆಯನ್ನು ನೀಡಿ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಸೂಚಿಸಲಾಯಿತು. ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಗೆ ಸಂಬಂಧಿಸಿದಂತೆ ಆಗಿಂದಾಗ್ಗೆ ಮಾಹಿತಿ ನೀಡುವ ಬಗ್ಗೆ, ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ದಕ್ಕೆ ಆಗದಂತೆ ಶಾಲೆ / ಕಾಲೇಜುಗಳನ್ನು ಪ್ರಾರಂಭಿಸುವ ಹಾಗೂ ಅಂತ್ಯಗೊಳಿಸುವ ಸಮಯವನ್ನು ಬದಲಾಯಿಸಿಕೊಳ್ಳುವಂತೆ ಹಾಗೂ ವಿದ್ಯಾರ್ಥಿಗಳನ್ನು ಕರೆತರುವ ಶಾಲಾ ವಾಹನ ಸೇರಿದಂತೆ ಇತರೇ ಬಾಡಿಗೆ ವಾಹನಗಳಾದ ಆಟೋ, ಟ್ಯಾಕ್ಸಿ ಇತ್ಯಾದಿಗಳ ಚಾಲಕರ, ಸಹಾಯಕರ ಪೂರ್ವಾಪರ ಮಾಹಿತಿಯನ್ನು ಪೊಲೀಸ್ ಠಾಣೆಗಳ ಮುಖಾಂತರ ಪರಿಶೀಲಿಸಿ ವರದಿ ಪಡೆಯುವಂತೆ ಹಾಗೂ ತಿಳಿಹೇಳಲಾದ ಎಲ್ಲಾ ಸೂಚನೆಗಳನ್ನು ಶೀಘ್ರವಾಗಿ ಪಾಲನೆ ಮಾಡುವಂತೆ ಸೂಚಿಸಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *