DAKSHINA KANNADA
ಇನ್ಸಪೆಕ್ಟರ್ ಗೆ ಆವಾಜ್ ಹಾಕಿದ ಸಂಸದ ನಳೀನ್ ಕುಮಾರ್ ಕಟೀಲ್ ಮೇಲೆ ಕೇಸ್

ಮಂಗಳೂರು ಸೆಪ್ಟೆಂಬರ್ 8: ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ರೌದ್ರಾವತಾರ ತಾಳಿ ಆವಾಜ್ ಹಾಕಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಐಪಿಸಿ ಸೆಕ್ಷನ್ 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕದ್ರಿ ಠಾಣೆಯಲ್ಲಿ ಇನ್ಸ್ಪೆಕ್ಟರ್ ಮಾರುತಿ ನಾಯ್ಕ್ ಪ್ರಕರಣ ದಾಖಲಿಸಿದ್ದಾರೆ .
ಮಂಗಳೂರು ಚಲೋ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಬಂಧನ
ಮಂಗಳೂರು ಚಲೋ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ ಸೇರಿದಂತೆ ಇತರ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕದ್ರಿಯ ಗೋರಕ್ಷನಾಥ ಹಾಲ್ ನಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಂಸದರಾದ ನಳೀನ್ ಕುಮಾರ್ ಕಟೀಲ್ ಹಾಗು ಶೋಭಾ ಕರಂದ್ಲಾಜೆ ಸ್ಥಳಕ್ಕೆ ಧಾವಿಸಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು .ಈ ಸಂದರ್ಭದಲ್ಲಿ ಬಿಡುಗಡೆಗೆ ಒಪ್ಪದ ಕದ್ರಿ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ನಾಯ್ಕ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ಸಿಟ್ಟಿಗೆದ್ದು ಇನ್ಸ್ಪೆಕ್ಟರ್ ಮಾರುತಿ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ರೌದ್ರಾವತಾರ ನಳಿನ್ ಕುಮಾರ್ ಕಟೀಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ನಡುವೆ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವರ್ತನೆಯ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ದ ಈಗ ಪೊಲೀಸರು ತಿರುಗಿ ಬಿದ್ದಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.