Connect with us

LATEST NEWS

ಕ್ರೈಸ್ತರ ಸುಗ್ಗಿ ಹಬ್ಬ ಮೊಂತಿ ಫೆಸ್ಟ್ ಸಡಗರ

ಮಂಗಳೂರು ಅಗಸ್ಟ್ 8: ತುಳುನಾಡು ಕೃಷಿ ಪ್ರಧಾನ ನಾಡೆಂದೇ ಪ್ರಖ್ಯಾತಿ ಪಡೆದಿದೆ ಇಲ್ಲಿ ಕೃಷಿಯೇ ಪ್ರಧಾನ. ವರ್ಷ ಪೂರ್ತಿ ದುಡಿದು ದಣಿದ ದೇಹಕ್ಕೆ ಇದೀಗ ಕೃಷಿ ಇಳುವರಿ ಬರುವ ಸಮಯ. ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಬಳಸುವ ಮೊದಲು ದೇವರಿಗೆ ಅರ್ಪಿಸುವುದು ಇಲ್ಲಿಯ ಸಂಪ್ರದಾಯ. ದೇವರಿಗೆ ಸಮರ್ಪಿಸಿ ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಸಂಭ್ರಮದಿಂದ ತಿನ್ನುವ ವಾಡಿಕೆ ಇಲ್ಲಿದೆ. ಈ ಸಂಪ್ರದಾಯ ಹಿಂದೂ ಧರ್ಮಿಯರಲ್ಲಿ ಮಾತ್ರವಲ್ಲದೆ ಇಲ್ಲಿಯ ಕ್ರೈಸ್ತ ಧರ್ಮೀಯರಲ್ಲಿಯೂ ಕಂಡುಬರುತ್ತದೆ .

ಇಲ್ಲಿಯ ಹಿಂದೂ ಧರ್ಮೀಯರು ಚೌತಿಯಂದು ಅಥವಾ ನವರಾತ್ರಿಯಂದು ಇಂತಹ ಹಬ್ಬ ಆಚರಿಸಿದರೆ, ಕ್ರೈಸ್ತ ಧರ್ಮೀಯರು ಸಾಮೂಹಿಕ ಮೋಂತಿ ಫೆಸ್ಟ್ ಹಬ್ಬದಂದು ಆಚರಿಸುತ್ತಾರೆ. ಅದಕ್ಕೆ ಕ್ರೈಸ್ತರು ಸುಗ್ಗಿ ಹಬ್ಬ, ತೆನೆ ಹಬ್ಬ ಎಂದು ಕರೆಯುತ್ತಾರೆ .
ಇಂದು ಕ್ರೈಸ್ತರ ಪವಿತ್ರ ಮಾತೆ ಮೇರಿಯವರ ಜನ್ಮದಿನ . ಈ ಸಂಭ್ರಮವನ್ನು ಕ್ಯಾಥೋಲಿಕ್ ಬಾಂಧವರು ತೆನೆ ಹಬ್ಬವಾಗಿ ಆಚರಿಸುತ್ತಾರೆ. ಕರಾವಳಿ ಕರ್ನಾಟಕದಲ್ಲೂ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೆಳಿಗ್ಗೆ ಪ್ರಾರ್ಥನಾ ಮಂದಿರಗಳಲ್ಲಿ ಕ್ರೈಸ್ತ ಬಾಂಧವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುತ್ತಾರೆ .
ತೆನೆ ಹಬ್ಬದ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡದ ಚರ್ಚ್ ಗಳಲ್ಲಿ ವಿಶೇಷ ಪೂಜೆ , ಪ್ರಾರ್ಥನೆ ಸಲ್ಲಿಸಲಾಯಿತು . ನಗರದ ಬೆಂದೂರ್ ವೆಲ್ ನಲ್ಲಿರುವ ಸೆಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಇಂದು ಮುಂಜಾನೆ ಕ್ರೈಸ್ತ ಬಾಂಧವರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು . ಮಕ್ಕಳು ಮತ್ತು ಹಿರಿಯರು ಉತ್ಸಾಹದಿಂದ ಮಾತೆ ಮೇರಿಯ ಗುಡಿಗೆ ಹೂ ಅರ್ಪಿಸಿದರು . ಬಳಿಕ ತೆನೆ ಹಾಗೂ ಕಬ್ಬನ್ನು ವಿತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು .
ಪಾಶ್ಚಾತ್ಯ ಸಂಸ್ಕೃತಿಯ ಅಲೆಯ ಭೀತಿ ಎದುರಾಗಿರುವ ಸಂದರ್ಭದಲ್ಲಿಯೂ ಈ ಹಬ್ಬದ ಆಚರಣೆ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆ .
ಕ್ರೈಸ್ತರ ಸುಗ್ಗಿ ಹಬ್ಬ ಮೋಂತಿ ಫೆಸ್ಟ್ ಹಿನ್ನೆಲೆಯಲ್ಲಿ ಮಂಗಳೂರು ಮಿರರ್ ವತಿಯಿಂದ ಕ್ರೈಸ್ತ ಬಾಂಧವರಿಗೆ ಮೋಂತಿ ಫೆಸ್ಟ್ ಹಬ್ಬದ ಶುಭಾಶಯಗಳು.

Advertisement
Click to comment

You must be logged in to post a comment Login

Leave a Reply