DAKSHINA KANNADA
ಬ್ಯಾರಿಕೇಡ್ ಗಳ ನಡುವೆ ಪುತ್ತೂರು ನಗರ ಪೊಲೀಸ್ ಠಾಣೆ….!!

ಬ್ಯಾರಿಕೇಡ್ ಗಳ ನಡುವೆ ಪುತ್ತೂರು ನಗರ ಪೊಲೀಸ್ ಠಾಣೆ….!!
ಪುತ್ತೂರು ಮೇ.29: ಕೊರೊನಾ ಲಾಕ್ ಡೌನ್ ಸಂದರ್ಭ ಜನರನ್ನ ರಸ್ತೆಗೆ ಇಳಿಯದಂತೆ , ಜನ ವಾಹನಗಳಲ್ಲಿ ತೀರುಗಾಡದಂತೆ ಬ್ಯಾರಿಕೇಡ್ ಹಾಕುತ್ತಿದ್ದ ಪೊಲೀಸರು ಈಗ ತಮ್ಮ ಠಾಣೆಗೆ ಕೊರೊನಾ ಹರಡದಂತೆ ಬಂದೋಬಸ್ತ್ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರ ಪೋಲೀಸ್ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆಯನ್ನು ರಕ್ಷಿಸಲು ಇಡೀ ಠಾಣೆಯ ಸುತ್ತ ಬ್ಯಾರಿಕೇಡ್ ಅಳವಡಿಸಿಕೊಂಡಿದ್ದಾರೆ. ಹೊರಗಿನ ಜನರಿಗೆ ಈ ರೀತಿಯ ಭದ್ರತೆ ನೋಡಿ ಇಡೀ ಠಾಣೆಯೇ ಸೀಲ್ ಡೌನ್ ಆಗಿದೆಯೋ ಎನ್ನುವ ರೀತಿಯಲ್ಲಿ ಕಾಣಿಸುತ್ತಿದೆ. ಠಾಣೆಗೆ ಬರುವ ಸಾರ್ವಜನಿಕರು ಠಾಣೆಯ ಹೊರಗೇ ಹಾಕಿರುವ ಟೇಬಲ್ ನಲ್ಲೇ ತಮ್ಮ ಅಹವಾಲನ್ನು ನೀಡಬೇಕಿದ್ದು, ಎಲ್ಲಾ ವ್ಯವಹಾರಗಳನ್ನು ಮಾಡುವ ಮೊದಲು ಸ್ಯಾನಿಟೈಸರ್ ಮೂಲಕ ತಮ್ಮ ಕೈಗಳನ್ನು ಶುಚಿಗೊಳಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ಠಾಣೆಯ ನಾಲ್ಕು ಮಂದಿ, ಇಬ್ಬರು ಮಹಿಳಾ ಠಾಣಾ ಹಾಗೂ ಇಬ್ಬರು ಟ್ರಾಫಿಕ್ ಠಾಣಾ ಸಿಬ್ಬಂದಿಗಳ ಗಂಟಲಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಈ ನಡುವೆ ಠಾಣೆಯಲ್ಲಿರುವ ಪೋಲೀಸರಿಗೆ ಹಾಗೂ ಅವರ ಮನೆ ಮಂದಿಗೂ ಕೊರೊನಾ ಭಯ ಕಾಡಲಾರಂಭಿಸಿದೆ.