DAKSHINA KANNADA
ಪಾನ್ ತಿಂದು ಹಣ ನೀಡದೇ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ ಪೊಲೀಸರು….!!
ಕಡಬ ಎಪ್ರಿಲ್ 09: ಪೊಲೀಸ್ ಸಿಬ್ಬಂದಿಯೊಬ್ಬ ಪಾನ್ ತಿಂದು ಅಂಗಡಿಯವನಿಗೆ ಹಣ ನೀಡದೆ ಅಂಗಡಿಯ ಮಾಲೀಕನಿಗೆ ಹಿಗ್ಗಾಮುಗ್ಗ ಧಳಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಏಕಾಹಭಜನ ಮಹೋತ್ಸವದ ಭದ್ರತೆಗಾಗಿ ಹೆಚ್ಚುವರಿಯಾಗಿ ಉಪ್ಪಿನಂಗಡಿ ಠಾಣೆಯ ಶಿಶಿಲದ ಮೋಹನ್ ಮತ್ತು ಸೀತಾರಾಮ ಎಂಬ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿನ್ನೆ ಮಧ್ಯರಾತ್ರಿ ಇಬ್ಬರು ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಗೆ ಬಂದು, ಬೀಡಾ ತಿಂದು ಹಣ ನೀಡದೆ ಹೋಗಲು ಮುಂದಾಗಿದ್ದಾರೆ.
ಆಗ ಪಾನ್ ಅಂಗಡಿ ಮಾಲೀಕ ಇಬ್ಬರ ಬಳಿ 20 ರೂಪಾಯಿ ನೀಡುವಂತೆ ಕೇಳಿದ್ದಾನೆ. ಆಗ ಕೋಪಗೊಂಡ ಪೊಲೀಸರು ಪೊಲೀಸರ ಬಳಿಯೇ ಹಣ ಕೇಳುತ್ತಿಯಾ ಎಂದು ಕೈಯಲ್ಲಿದ್ದ ಲಾಠಿಯಿಂದ ಪಾನ್ ಅಂಗಡಿ ಮಾಲೀಕನಿಗೆ ಹೊಡೆದಿದ್ದಾರೆ.ಅಲ್ಲದೇ ಅಂಗಡಿಗೆ ಹಾನಿ ಮಾಡಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದ ಸ್ಥಳೀಯರು ಪೊಲೀಸರ ದುರ್ವರ್ತನೆಯನ್ನು ಪ್ರಶ್ನಿಸಿದ್ದಾರೆ. ಪೊಲೀಸರ ಕಾರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮೋಹನ್ ಎಂಬ ಪೊಲೀಸ್ ಸಿಬ್ಬಂದಿ ಎಸ್ಕೇಪ್ ಆಗಿದ್ದು ಸೀತಾರಾಮ ಎಂಬವರ ಕಾರಿನ ಸುತ್ತ ಜನ ಜಮಾಯಿಸಿದ್ದಾರೆ. ಅಲ್ಲದೇ ಅವರ ವರ್ತನೆಯನ್ನು ಪ್ರಶ್ನಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಹಲ್ಲೆಯಿಂದ ಅಸ್ಪಸ್ಥಗೊಂಡ ಪಾನ್ ಅಂಗಡಿ ಮಾಲೀಕ ಕಡಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಹಿತಿ ತಿಳಿದ ಎಸ್.ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜಿಯಲ್ಲಿ ಪ್ರಕರಣ ಮುಗಿಸುವ ತೀರ್ಮಾನಕ್ಕೆ ಬಂದಿದ್ದು ಬೀಡ ಸ್ಟಾಲ್ ನಾಶ ಪಡಿಸಿದಕ್ಕೆ ಸುಮಾರು 5 ಸಾವಿರ ರೂ ಮೊತ್ತ ಹಾಗೂ ಕ್ಷಮೆಯಾಚಿಸುವುದಾಗಿ ತೀರ್ಮಾನಕ್ಕೆ ಬರಲಾಯಿತು.