BANTWAL
ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ ;ಬಂಟ್ವಾಳದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ..!
ಬಂಟ್ವಾಳ : ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಾದ ಪ್ರೀತಮ್ ಎಂಬವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರುದ್ದ ಹಾಗೂ ಘಟನೆಯಿಂದ ಅನ್ಯಾಯಕ್ಕೊಳಗಾದ ವಕೀಲ ಪ್ರೀತಮ್ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ವಕೀಲರ ಸಂಘ (ರಿ ) ಬಂಟ್ವಾಳದ ವತಿಯಿಂದ ಜೆ ಎಂ ಎಫ್ ಸಿ ಕೋರ್ಟ್ ಆವರಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ ಅವರು ಪೋಲೀಸರು ವಕೀಲರ ಮೇಲೆ ನಡೆಸಿದ ಗೂಂಡ ವರ್ತನೆ ಖಂಡನೀಯವಾಗಿದ್ದು, ಬಂಟ್ವಾಳದ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.ಈ ಘಟನೆಯನ್ನು ಲಘುವಾಗಿ ತೆಗೆದುಕೊಳ್ಳದೆ, ಸರಕಾರ ಗಂಭೀರವಾಗಿ ಪರಿಗಣಿಸಿ ವಕೀಲರ ವೃತ್ತಿಗೆ ಅಡ್ಡಿ ಯಾಗದಂತೆ ನ್ಯಾಯ ಒದಗಿಸಿಕೊಡುವಂತೆ ತಿಳಿಸಿದರು. ವಕೀಲರ ಸಂಘದ ಸದಸ್ಯ ಮೋಹನ್ ಕಡೇಶಿವಾಲಯ ಮಾತನಾಡಿ, ವಕೀಲರ ರಕ್ಷಣಾ ಕಾಯ್ದೆ ಶೀಘ್ರವಾಗಿ ಜಾರಿಯಾಗಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು, ಅತ್ಯಂತ ಶೀಘ್ರವಾಗಿ ಗೃಹ ಸಚಿವರು ಪೋಲೀಸ್ ಇಲಾಖೆಯನ್ನು ಹದ್ದುಬಸ್ತಿನಲ್ಲಿಡಬೇಕು. ಗೂಂಡಗಿರಿಯನ್ನು ನಿಲ್ಲಿಸಲು ಸೂಚನೆ ನೀಡಬೇಕು ಎಂದು ಒತ್ತಾಯ ಮಾಡಿದರು. ಪೋಲೀಸರ ವರ್ತನೆ ಮಿತಿಮೀರಿದ್ದು, ಕಾನೂನು ಪಾಲನೆ ಮಾಡುವ ನಮಗೆ ಬೂಟಿನಿಂದ ತುಳಿಯುವುದು ಗೊತ್ತು ಎಂದು ಅಕ್ರೋಶ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತ ಎಮ್, ಕಾರ್ಯದರ್ಶಿ ಚಂದ್ರಶೇಖರ ಡಿ.ಬೈರಿಕಟ್ಟೆ, ಉಪಾಧ್ಯಕ್ಷ ರಾಜೇಶ್ ಬೊಲ್ಲುಕಲ್ಲು, ಕೋಶಾಧಿಕಾರಿ ನಿರ್ಮಲ, ಜೊತೆ ಕಾರ್ಯದರ್ಶಿ ಸುನೀತಾ ಕೆ, ಸಾಂಸ್ಕೃತಿಕ ಕಾರ್ಯದರ್ಶಿ ವೀರೇಂದ್ರ ಎಮ್ ಸಿದ್ದಕಟ್ಟೆ ಹಾಗೂ ಹಿರಿಯ ,ಕಿರಿಯ ವಕೀಲರು ಭಾಗವಹಿಸಿದರು.