LATEST NEWS
ರಾಗಿಂಗ್ ಪ್ರಕರಣ ಭೇದಿಸಲು ಮೆಡಿಕಲ್ ವಿಧ್ಯಾರ್ಥಿನಿಯಂತೆ ನಟಿಸಿದ ಪೊಲೀಸ್ ಸಿಬ್ಬಂದಿ

ಭೋಪಾಲ್ ಡಿಸೆಂಬರ್ 13:ಕಾಲೇಜಿನಲ್ಲಿ ನಡೆಯುತ್ತಿದ್ದ ರಾಗಿಂಗ್ ಪ್ರಕರಣವನ್ನು ಭೇದಿಸಲು ಪೊಲೀಸ್ ಮಹಿಳಾ ಸಿಬ್ಬಂದಿಯೊಬ್ಬರು ವಿಧ್ಯಾರ್ಥಿನಿಯಂತೆ ನಟಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿನ ಸರ್ಕಾರಿ ಮಹಾತ್ಮ ಗಾಂಧಿ ಮೆಮೊರಿಯಲ್ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣವನ್ನು ಭೇದಿಸಲು ಮಹಿಳಾ ಪೊಲೀಸ್ ಪೇದೆ 3 ತಿಂಗಳ ಕಾಲ ವೈದ್ಯಕೀಯ ವಿದ್ಯಾರ್ಥಿನಿಯಂತೆ ನಟಿಸಿದ್ದರು ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುಜಿಸಿ ಸಹಾಯವಾಣಿಗೆ ಬಂದಿದ್ದ ದೂರಿನಲ್ಲಿ ರ‍್ಯಾಗಿಂಗ್ ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಲಾಗಿತ್ತು. ಆದರೆ ಆರೋಪಿ ಹಾಗೂ ದೂರುದಾರರ ಹೆಸರನ್ನು ಉಲ್ಲೇಖಿಸಲಾಗಿರಲಿಲ್ಲ. ದೂರು ನೀಡಿದ ವಿದ್ಯಾರ್ಥಿಯ ಫೋನ್ ನಂಬರ್ ಕೂಡಾ ಬಹಿರಂಗಪಡಿಸಲಾಗಿರಲಿಲ್ಲ. ಈ ಹಿನ್ನೆಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ಅಧಿಕಾರಿಯೊಬ್ಬರನ್ನು ಕಾಲೇಜಿಗೆ ವಿದ್ಯಾರ್ಥಿಯ ವೇಷದಲ್ಲಿ ಕಳುಹಿಸಬೇಕಾಯಿತು ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ತಹಜೀಬ್ ಖಾಜಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾನ್‌ಸ್ಟೆಬಲ್ ಶಾಲಿನಿ ಚೌಹಾಣ್ (24) ಅವರನ್ನು ಮೊದಲಿಗೆ ಕಾಲೇಜಿಗೆ ವಿದ್ಯಾರ್ಥಿನಿಯ ರೂಪದಲ್ಲಿ ಕಳುಹಿಸಲಾಗಿತ್ತು. ಅವರು ವೈದ್ಯಕೀಯ ವಿದ್ಯಾರ್ಥಿಯಂತೆ ನಟಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಪ್ರಕರಣದ ಬಗ್ಗೆ ಇನ್ನಷ್ಟು ಆಳವಾಗಿ ತನಿಖೆ ನಡೆಸಲು ಇನ್ನೊಬ್ಬ ಮಹಿಳಾ ಸಿಬ್ಬಂದಿಯನ್ನು ನರ್ಸ್ ವೇಷದಲ್ಲಿ ಕಳುಹಿಸಲಾಯಿತು. ಬಳಿಕ ಇನ್ನಿಬ್ಬರು ಕಾನ್‌ಸ್ಟೇಬಲ್‌ಗಳನ್ನು ಕ್ಯಾಂಟೀನ್ ಕೆಲಸಗಾರರಂತೆ ಕಾಲೇಜಿಗೆ ಕಳುಹಿಸಲಾಯಿತು ಎಂದು ವಿವರಿಸಿದ್ದಾರೆ.
ಮಾರುವೇಷದಲ್ಲಿ ಹೋಗಿದ್ದ ಪೊಲೀಸರು ತನಿಖೆಯ ವೇಳೆ ಅಪರಾಧವನ್ನು ದೃಢಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ 11 ವಿದ್ಯಾರ್ಥಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಆರೋಪಿ ಸೀನಿಯರ್ ವಿದ್ಯಾರ್ಥಿಗಳು ತಮ್ಮ ಜೂನಿಯರ್‌ಗಳಿಗೆ ಅಶ್ಲೀಲ ಕೃತ್ಯವನ್ನು ಮಾಡುವಂತೆ ಒತ್ತಾಯಿಸಿ ರ‍್ಯಾಗಿಂಗ್ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.