DAKSHINA KANNADA
ಹೊಸದಾಗಿ ಪಡಿತರ ಅಂಗಡಿ ತೆರೆಯಲು ಅವಕಾಶ : ಸಚಿವ ಖಾದರ್

ಮಂಗಳೂರು, ಆಗಸ್ಟ್ 27 : ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪ್ರದೇಶಗಳಲ್ಲಿ ಪಡಿತರ ಅಂಗಡಿ ತೆರೆಯುವುದು ರಾಜ್ಯ ಸರಕಾರದ ಉದ್ದೇಶವಾಗಿದ್ದು ಅದಕ್ಕಾಗಿ ರಾಜ್ಯದಲ್ಲಿ ಹೊಸದಾಗಿ ಪಡಿತರ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಹೊಸ ಪಡಿತರ ಅಂಗಡಿ ತೆರೆಯಲು ನಗರದಲ್ಲಿ 800 ಹಾಗೂ ಗ್ರಾಮೀಣ ಭಾಗದಲ್ಲಿ ಕನಿಷ್ಟ 500 ಮಂದಿ ಪಡಿತರ ಚೀಟಿದಾರರು ಇರಬೇಕು . ಈ ಮಾದರಿಯ ಹೊಸ ಪಡಿತರ ಅಂಗಡಿಗಳಿಗೆ ಪರವಾನಿಗೆ ನೀಡಲಾಗುವುದು. ಈಗಾಗಲೇ ರಾಜ್ಯದಲ್ಲಿ ಶೇಕಡ 60 ಪಡಿತರ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ಸ್ ಯಂತ್ರ ಅಳವಡಿಸಲಾಗಿದೆ. ಬಾಕಿ ಇರುವ ಪಡಿತರ ಅಂಗಡಿಗಳು ಕೂಡಲೇ ಪಿಒಎಸ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಇದರಿಂದ ಪಡಿತರ ಸಾಮಗ್ರಿ ಕಾರ್ಡ್ ದಾರರನ್ನು ತಲುಪಲು ಖಾತರಿ ಯಾಗುತ್ತದೆ. ಪಿಒಎಸ್ ಗಳಿಂದ ಪಡೆದ ಪಡಿತರ ಸಾಮಗ್ರಿಗಳು ಬೇರೆ ಕಡೆ ಮಾರಾಟ ಮಾಡಿದರೆ ಮಾರಾಟ ಮಾಡಿದವರು ಮತ್ತು ಖರೀದಿಸಿವರ ಮೇಲೂ ಕ್ರಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.ಆದರೆ ಕೆಲವು ಸೊಸೈಟಿಗಳಲ್ಲಿ ಪಾಯಿಂಟ್ ಆಫ್ ಸೇಲ್ಸ್ ಮಷೀನ್ ಗಳನ್ನು ಅಳವಡಿಸಿಲ್ಲ,ಅಲ್ಲದೆ ಮುಂದಿನ ತಿಂಗಳಿಂದ ಪಡಿತರ ಸಾಮಗ್ರಿ ನೀಡಲಾಗುವುದಿಲ್ಲ ಎಂದು ಬೋರ್ಡ್ ಕೂಡ ಹಾಕಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅಂತ ಸೊಸೈಟಿಗಳಿಗೆ ಸಹಕಾರಿ ಇಲಾಖೆ ಮೂಲಕ ನೋಟಿಸ್ ನೀಡಲಾಗಿದೆ ಎಂದು ಖಾದರ್ ಹೇಳಿದರು. ಸಹಕಾರಿ ಸೊಸೈಟಿಗಳಲ್ಲಿ ನಾಗರಿಕರಿಗೆ ನೆರವಾಗಲು ಪಡಿತರ ಸಾಮಗ್ರಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪಡಿತರ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಜಿಪಿಎಸ್ ಅಳವಡಿಸಿದ ಗೂಡ್ಸ್ ವಾಹನಗಳಲ್ಲಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಇದರಿಂದ ಯಾವ ಅಂಗಡಿಗೆ ಎಷ್ಟೆಷ್ಟು ಕ್ರಮದಲ್ಲಿ ಯಾವ ಸ್ಥಳದಲ್ಲಿ ಪಡಿತರ ಸಾಮಗ್ರಿ ಪೂರೈಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಸಚಿವ ಹೇಳಿದರು.