DAKSHINA KANNADA
ಪುತ್ತೂರು – ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಪುತ್ತೂರು ಜುಲೈ 31: ಏಳು ವರ್ಷಗಳ ಹಿಂದೆ ಮೈಂದನಡ್ಕದ ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಆರೋಪಿಗೆ ಪೋಕ್ಸೋ ಪ್ರಕರಣದಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ನೀಡಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಜೈಲು ಶಿಕ್ಷೆಗೊಳಗಾದ ಆರೋಪಿಯನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ದಿಂಡೂರ ನಿವಾಸಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂದು ಗುರುತಿಸಲಾಗಿದೆ. 2017ರ ಆಗಸ್ಟ್‌ನಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿ ಅಪ್ರಾಪ್ತ ಬಾಲಕಿಯನ್ನು ತನ್ನ ಬಾಡಿಗೆ ಮನೆಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ, ಬಳಿಕ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ. ಬಾಲಕಿಯ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳನ್ನು ವಿಚಾರಿಸಿದೆ. ನ್ಯಾಯಾಧೀಶೆ ಸರಿತಾ ಡಿ. ಆರೋಪಿಗೆ ಭಾ.ದಂ.ಸಂ. ಕಲಂ 376ರಡಿ ಅಪರಾಧಕ್ಕೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಶಿಕ್ಷೆ ಮತ್ತು ಭಾ.ದಂ.ಸಂ. ಕಲಂ 506ರಡಿ ಅಪರಾಧಕ್ಕೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು ರೂ. 10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ದಂಡ ಪ್ರಕ್ರಿಯ ಸಂಹಿತೆ ಕಲಂ 357ಎ ಯಲ್ಲಿ ಬಾಲಕಿಗೆ 6 ಲಕ್ಷ ರೂ. ಪರಿಹಾರ ರೂಪವಾಗಿ ನೀಡಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಆದೇಶಿಸಿದೆ.