Connect with us

KARNATAKA

ನ್ಯುಮೋನಿಯಾ ಚೀನಾ ವೈರಸ್‌; ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಹೈ ಅಲರ್ಟ್‌, ಮಾರ್ಗಸೂಚಿ ಜಾರಿ..!

ಬೆಂಗಳೂರು : ಕೊರೊನಾದ ಬಳಿಕ ಹಬ್ಬಿರುವ ಮತ್ತೊಂದು ಮಹಾಮಾರಿ ನ್ಯುಮೋನಿಯಾ ವೈರಸ್‌ ಚೀನಾ ಕಂಗೆಟ್ಟಿದ್ದು ಇದು ಭಾರತಕ್ಕೂ ಹಬ್ಬುವ ಆತಂಕ ತಲೆದೋರಿದೆ .ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಉಲ್ಬಣವಾಗಿದ್ದು, ನ್ಯುಮೋನಿಯಾದಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿಹೋಗಿವೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಹೈ ಅಲರ್ಟ್‌ ಘೋಷಿಸಿವೆ. ಕರ್ನಾಟಕ, ಹರಿಯಾಣ, ರಾಜಸ್ಥಾನ, ಗುಜರಾತ್, ಉತ್ತರಾಖಂಡ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಉಸಿರಾಟದ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಳಿಕೊಂಡಿವೆ.

ಚೈನಾ ನ್ಯುಮೋನಿಯಾ ಬಗ್ಗೆ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈನಾ ನ್ಯುಮೋನಿಯಾ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ. ಇದೇ ರೀತಿ ಕೇಂದ್ರ ಸರ್ಕಾರವೂ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹೇಳಿದರು. ರಾಜ್ಯದಲ್ಲಿ ಇದುವರೆಗೆ ಚೈನಾ ನ್ಯುಮೋನಿಯಾಗೆ ಸಂಬಂಧಿಸಿದ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಸಂಬಂಧ ಅಣಕು ಪ್ರದರ್ಶನ ನಡೆಸಿ ಎಚ್ಚರಿಕೆ ಮೂಡಿಸಬೇಕು ಎಂಬುದೂ ಸೇರಿದಂತೆ ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಕೆ ಮಾಡಲು ಆದ್ಯತೆ ನೀಡುವಂತೆ ಹೇಳಲಾಗಿದೆ ಎಂದರು.ಜ್ವರ ಬಂದ ತಕ್ಷಣ ಜನ ಆಸ್ಪತ್ರೆಗಳಿಗೆ ತೆರಳಿ ವಿವಿಧ ಪರೀಕ್ಷೆಗಳಿಗೆ ಒಳಪಡಬೇಕು ಎಂದ ಅವರು, ಈ ಶೀತಜ್ವರ ಸಾಮಾನ್ಯವಾಗಿ ಐದು ದಿನಗಳವರೆಗೆ ಇರುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಇದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು. ವಯೋವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಅದೇ ರೀತಿ ವಿವಿಧ ರೋಗಗಳಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು. ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರಗಳನ್ನು ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಆಗಾಗ ಕೈ ತೊಳೆಯುತ್ತಿರಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಜನರಿಗೆ ಮನವಿ ಮಾಡಿಕೊಂಡರು. ಸೋಂಕಿಗೆ ಸಂಬಂಧಿಸಿದಂತೆ ನಿತ್ಯ ಅಧಿಕಾರಿಗಳು ನಿಗಾ ವಹಿಸುತ್ತಾರೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದ ಸಚಿವರು, ಇಷ್ಟೆಲ್ಲದರ ನಡುವೆಯೂ ಜನ ಆತಂಕಪಡುವ ಅಗತ್ಯವೇನಿಲ್ಲ. ಆದರೆ, ಸೋಂಕಿನ ಕುರಿತು ಎಚ್ಚರಿಕೆಯಿರಲಿ ಎಂದು ಸಲಹೆ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *