LATEST NEWS
ನರೇಂದ್ರ ಮೋದಿಯವರು ಘೋಷಿಸಿದ ”ಪಿಎಂ ವಿಶ್ವಕರ್ಮ” ಯೋಜನೆ: ಪೂರ್ವಭಾವಿ ಸಭೆ

ಮಂಗಳೂರು ಸೆಪ್ಟೆಂಬರ್ 16: ದೇಶದ ಕರಕುಶಲ ಕರ್ಮಿಗಳಿಗೆ ವರದಾನವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ “ಪಿಎಂ ವಿಶ್ವಕರ್ಮ” ಯೋಜನೆಯು ಇದೇ ಸೆಪ್ಟೆಂಬರ್ 17 ರ ವಿಶ್ವಕರ್ಮ ಜಯಂತಿಯಂದು ಅಧಿಕೃತವಾಗಿ ಜಾರಿಗೊಳ್ಳುತ್ತಿರುವುದರಿಂದ, ನಗರದ ಟಿ.ಎಂ.ಪೈ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಪ್ರಮುಖರ ಪೂರ್ವಭಾವಿ ಸಭೆಯನ್ನು ನಗರದ ಅಟಲ್ ಸೇವಾ ಕೇಂದ್ರದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಬಡಗಿ, ದೋಣಿ ತಯಾರಕ, ಶಸ್ತ್ರಕಾರರು, ಕಮ್ಮಾರ, ಸುತ್ತಿಗೆ ಇತ್ಯಾದಿ ತಯಾರಿಸುವವರು, ಬೀಗ ಮತ್ತು ಕೀಲಿ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಚಮ್ಮಾರರು, ಮೇಸ್ತ್ರಿಗಳು, ಬುಟ್ಟಿ ಹೆಣೆಯುವವರು, ಬೊಂಬೆ ತಯಾರಿಸುವವರು, ಕ್ಷೌರಿಕರು, ಹೂಮಾಲೆ ತಯಾರಕರು, ಡೋಬಿ, ದರ್ಜಿಗಳು, ಮೀನಿನ ಬಲೆ ತಯಾರಕರು ಹೀಗೆ 18 ವಿವಿಧ ಭಾರತೀಯ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಸಿಕೊಂಡ ಕರಕುಶಲ ಕರ್ಮಿಗಳನ್ನು ಈ ಯೋಜನೆಯಡಿಯಲ್ಲಿ ಸೇರಿಸಲಾಗಿದೆ.

ದೇಶ ಸ್ವಾತಂತ್ರ್ಯ ಪಡೆದ ನಂತರ ಕರಕುಶಲಕರ್ಮಿಗಳಿಗೆ ಘೋಷಿಸಿದ ಅತಿ ದೊಡ್ಡ ಯೋಜನೆಯಾಗಿರುವ “ಪಿಎಂ ವಿಶ್ವಕರ್ಮ” ದಲ್ಲಿ ದೊರೆಯುವ ಸೌಲಭ್ಯಗಳು, ಫಲಾನುಭವಿಗಳಿಗಿರಬೇಕಾದ ಅರ್ಹತೆ, ಮುಂತಾದವುಗಳ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರಿವು ಮತ್ತು ಜಾಗೃತಿ ಮೂಡಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.