LATEST NEWS
75 ರೂ. ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಿದ ಮೋದಿ
ನವದೆಹಲಿ: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‍ಎಒ) 75ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 75 ರೂ. ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಅಭಿವೃದ್ಧಿ ಪಡಿಸಿದ 17 ಹೊಸ ಜೈವಿಕ ಬಲವರ್ಧಿತ ಬೆಳೆಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿ, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ನೀಡಿ ಖರೀದಿಸುವ ಬಗ್ಗೆ ಸರ್ಕಾರದ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ಎಂಎಸ್‍ಪಿ ಮತ್ತು ಸರ್ಕಾರದ ಸಂಗ್ರಹಣೆ ದೇಶದ ಆಹಾರ ಸುರಕ್ಷತೆಯ ಪ್ರಮುಖ ಭಾಗವಾಗಿದೆ. ಆದರೆ ಇದನ್ನು ಉತ್ತಮ ಸೌಲಭ್ಯಗಳೊಂದಿಗೆ ಮತ್ತು ವೈಜ್ಞಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮುಂದುವರಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಬದ್ಧರಾಗಿದ್ದೇವೆ. ದೇಶದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ರಾಗಿ ಮತ್ತು ಹೆಚ್ಚಿನ ಪೌಷ್ಠಿಕಾಂಶದ ಬೆಳೆಗಳಿಗೆ ಕೇಂದ್ರ ಉತ್ತೇಜನ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸರ್ಕಾರ ಜಾರಿ ಮಾಡಿದ್ದ ನೂತನ ಕೃಷಿ ತಿದ್ದುಪಡಿಗಳಿಂದ ರೈತರು ಮತ್ತಷ್ಟು ಲಾಭ ಪಡೆಯಲಿದ್ದಾರೆ. ಮತ್ತೊಂದೆಡೆ ಮದುವೆ ವಯಸ್ಸು ಎಷ್ಟಿರಬೇಕು ಎಂದು ನಿರ್ಧರಿಸಲು ಚರ್ಚೆಗಳು ನಡೆಯುತ್ತಿದೆ. ಈ ಕುರಿತು ರಚಿಸಿರುವ ಕಮಿಟಿ ವರದಿಯನ್ನು ನೀಡಿದ ಬಳಿಕ ನೂತನ ನಿಯಮಗಳನ್ನು ರೂಪಿಸಲಾಗುವುದು. ಹೆಣ್ಣು ಮಕ್ಕಳ ಮದುವೆಗೆ ಸರಿಯಾದ ವಯಸ್ಸಿನ ನಿರ್ಧಾರವನ್ನು ಏಕೆ ನೀಡಲಿಲ್ಲ ಎಂದು ದೇಶಾದ್ಯಂತ ಹೆಣ್ಣು ಮಕ್ಕಳು ನನಗೆ ಪತ್ರ ಬರೆಯುತ್ತಾರೆ. ಆದರೆ ತಜ್ಞರ ವರದಿ ಬಂದ ಕೂಡಲೇ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.