LATEST NEWS
ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯಾಗಿದ್ದ ಶಿರೂರು ಶ್ರೀಗಳು

ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯಾಗಿದ್ದ ಶಿರೂರು ಶ್ರೀಗಳು
ಉಡುಪಿ ಜುಲೈ 19: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿದ್ದ ಶಿರೂರು ಮಠದ ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಇಂದು ವಿಧಿವಶರಾಗಿದ್ದಾರೆ. ಮೂರು ಪರ್ಯಾಯವನ್ನು ಪೂರೈಸಿರುವ ಶ್ರೀಗಳು, ಸಂಗೀತ ಪ್ರೇಮಿಯಾಗಿದ್ದು, ಸ್ವತಹ ಡ್ರಮ್ಸ್ ವಾದಕರಾಗಿದ್ದರು. ಶಿರೂರು ಶ್ರೀಗಳಿಗೆ 55 ವರ್ಷ ವಯಸ್ಸಾಗಿತ್ತು.
1964ರಲ್ಲಿ ಶಿರೂರು ಶ್ರೀಗಳು ಜನನ. ಹೆಬ್ರಿ ಸಮೀಪ ಮಡಾಮಕ್ಕಿ ಮೂಲದ ವಿಠಲಾಚಾರ್ಯ ಮತ್ತು ಕುಸುಮಾ ದಂಪತಿ ಮಗನಾಗಿರುವ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ.

ಶ್ರೀಪಾದರು ಎಂಟನೇ ವರ್ಷದಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಶೀರೂರು ಮಠದ 30ನೇ ಯತಿಯಾಗಿದ್ದರು. 1978ರಲ್ಲಿ ಮೊದಲ ಬಾರಿ ಪರ್ಯಾಯ ಪೀಠವನ್ನೇರಿ 2010-12ರಲ್ಲಿ ಮೂರನೇ ಪರ್ಯಾಯ ಪೂರೈಸಿದ್ದರು. ಶಿರೂರು ಶ್ರೀಗಳು 1979_80, 1994_96, 2010_11 ಈ ವರ್ಷಗಳಲ್ಲಿ ಪರ್ಯಾಯ ಪಟ್ಟ ಸ್ವೀಕರಿಸಿದ್ದರು
ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿರುವ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸುಮಾರು 47ವರ್ಷ ಶ್ರೀಕೃಷ್ಣನ ಸೇವೆ ಮಾಡಿದ್ದಾರೆ. ಶ್ರೀಗಳು ಈಜು, ಡ್ರಮ್ಸ್, ಸಂಗೀತ, ಕರಾಟೆ ಪ್ರಿಯರಾಗಿದ್ದರು.
ಮೋದಿ ಮತ್ತು ಅಮಿತ್ ಶಾ ಅವರ ಅಭಿಮಾನಿಯಾಗಿದ್ದ ಅವರು 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷೇತರ ನೆಲೆಯಲ್ಲಿ ನಾಮಪತ್ರ ಸಲ್ಲಿಸಿ ಬಳಿಕ ಪ್ರಧಾನಿ ಮೋದಿ ನೆಪದಲ್ಲಿ ಹಿಂತೆಗೆದುಕೊಂಡಿದ್ದರು. ಚುನಾವಣೆ ಸಂದರ್ಭ ಅನಾರೋಗ್ಯಕ್ಕೆ ಈಡಾಗಿದ್ದರು.
ಲಕ್ಷ್ಮೀಶ ಆನೆಯನ್ನುಶ್ರೀಗಳು ಪ್ರೀತಿಯಿಂದ ಸಾಕಿದ್ದರು.ಅದರೆ ಅದು ಮದವೇರಿ ಸಮಸ್ಯೆಯಾದ ಬಳಿಕ ಸಕ್ಕರೆಬೈಲಿಗೆ ಕಳಿಸಿದ್ದರು.
ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಿದ್ದ ಶ್ರೀಗಳು ಇತ್ತೀಚೆಗೆ ಪಟ್ಟದ ದೇವರ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಅಸ್ವಸ್ಥರಾಗಿದ್ದ ಶಿರೂರು ಶ್ರೀಗಳು ತಮ್ಮ ಮಠದ ಪಟ್ಟದ ದೇವರನ್ನು ಶ್ರೀಕೃಷ್ಣ ಮಠಕ್ಕೆ ಪೂಜೆಗೆ ಒಪ್ಪಿಸಿದ್ದರು. ನಂತರ ಪಟ್ಟದ ದೇವರನ್ನು ಮರಳಿಸಲು ಇತರ ಮಠಾಧೀಶರು ನಿರಾಕರಿಸಿದ್ದರು.
ಶಿಷ್ಯ ಸ್ವೀಕಾರ ಮಾಡಿಕೊಳ್ಳದ ಹೊರತು ಪಟ್ಟದ ದೇವರನ್ನು ಶೀರೂರು ಶ್ರೀಗಳಿಗೆ ನೀಡುವುದಿಲ್ಲ ಎಂದು ಉಳಿದ ಮಠಾಧೀಶರು ಪಟ್ಟು ಹಿಡಿದಿದ್ದರು. ಮಠಾಧೀಶರ ಈ ನಡೆಯ ವಿರುದ್ದ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಶೀರೂರು ಶ್ರೀಗಳು ನ್ಯಾಯಾಲಯದ ಮೆಟ್ಟಿಲೆರಿದ್ದರು. ಅಲ್ಲದೆ ಇತ್ತೀಚೆಗೆ ಕೆವಿಯೆಟ್ ಸಲ್ಲಿಸಿ ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿಯೂ ಎಚ್ಚರಿಕೆಯನ್ನು ನೀಡಿದ್ದರು.