LATEST NEWS
ಪಿಲಿಕುಳ ನಿಸರ್ಗಧಾಮದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ರಾಣಿ ಹುಲಿ

ಮಂಗಳೂರು ಜೂನ್ 06: ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ನಿಸರ್ಗಧಾಮದಲ್ಲಿರುವ ಹುಲಿ, ಕಾಡುಶ್ವಾನ ಮರಿಗಳನ್ನಿಟ್ಟರೆ ರಿಯಾ, ಹೆಬ್ಬಾವು, ಕಾಳಿಂಗ ಸರ್ಪ ಮೊಟ್ಟೆಗಳನ್ನಿಟ್ಟಿವೆ.
ಕೊರೊನಾ ಲಾಕ್ ಡೌನ್ ಸಂದರ್ಭ ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂಧ ಇದೆ. ಈ ನಡುವೆ ಪಿಲಿಕುಳ ನಿಸರ್ಗಧಾಮ ಹೊಸ ಅತಿಥಿಗಳನ್ನು ಬರಮಾಡಿಕೊಂಡಿದೆ. ಪಿಲಿಕುಲದಲ್ಲಿರುವ 10 ವರ್ಷದ ಹುಲಿ ರಾಣಿ ಮೂರು ಮರಿಗಳಿಗೆ ಜನ್ಮ ನೀಡಿದೆ. 2019 ರಲ್ಲಿ ರಾಣಿ ಹುಲಿ 5 ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಿಗೆ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂದು ಹೆಸರಿಡಲಾಗಿತ್ತು. ಈ ಮರಿಗಳಿಗೆ ಪ್ರತ್ಯೇಕ ವಾಸದ ಮನೆಯನ್ನು 15 ಲಕ್ಷ ರೂ ವೆಚ್ಚದಲ್ಲಿ ಅಬುದಾಬಿಯ ರಾಮದಾಸ್ ದಂಪತಿಗಳು ನೀಡಿದ್ದರು. ಇದೀಗ ಪಿಲಿಕುಲದಲ್ಲಿ ಹುಲಿಗಳ ಸಂಖ್ಯೆ 13 ಕ್ಕೇ ಏರಿಕೆಯಾಗಿದೆ.

ಇನ್ನು ಪಿಲಿಕುಲದಲ್ಲಿರುವ ಕಾಡುಶ್ವಾನ ಧೋಳ್ ಕೂಡ ಇತ್ತೀಚೆಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕಾಡುಶ್ವಾನ 5 ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಲದಲ್ಲಿ ಕಾಡುಶ್ವಾನಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಉಷ್ಟ್ರಪಕ್ಷಿ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನ್ನಿಟ್ಟಿದ್ದು ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದೆ. ಇದರಲ್ಲಿ ಒಂದು ಮರಿ ಜನ್ಮತಾಳಿದೆ.
ಅಳಿವಿನಂಚಿನಲ್ಲಿರುವ ಅಪರೂಪದ ರೆಟಿಕ್ಯುಲೇಟೆಡ್ ಹೆಬ್ಬಾವು 20 ಮೊಟ್ಟೆಗಳನ್ನಿಟ್ಟು ಕಾವು ಕೊಡುತ್ತಿದೆ. ಕಳೆದ ಸಾಲಿನಲ್ಲಿ ಈ ಹೆಬ್ಬಾವು 17 ಮರಿಗಳಿಗೆ ಜನ್ಮ ನೀಡಿತ್ತು. ಇನ್ನೂ ಪಿಲಿಕುಲ ಮೃಗಾಲಯದಲ್ಲಿರುವ ನಾಗಮಣಿ ಕಾಳಿಂಗ ಸರ್ಪ ಆರು ಮೊಟ್ಟೆಗಳನ್ನಿಟ್ಟಿದೆ. ಅವುಗಳಿಗೆ ಕೃತಕ ಕಾವು ನೀಡಲಾಗುತ್ತಿದೆ. ಪಿಲಿಕುಲದಲ್ಲಿ 19 ಕಾಳಿಂಗ ಸರ್ಪಗಳಿವೆ