Connect with us

    DAKSHINA KANNADA

    ಹಂದಿ ಫಾರ್ಮ್ ನಿಂದ ಪುರಾತನ ದೇವಸ್ಥಾನ ಪವಿತ್ರತೆಗೆ ಧಕ್ಕೆಆರೋಪ – ಫಾರ್ಮ್ ಮುಚ್ಚಿಸಲು ಜಿಲ್ಲಾಧಿಕಾರಿಗೆ ಮನವಿ

    ಪುತ್ತೂರು : ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರವೊಂದಕ್ಕೆ ಹಂದಿ ಫಾರ್ಮ್ ಒಂದರಿಂದ ಅಪಚಾರವಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಗುಡಿಗೆ ಪಕ್ಕದಲ್ಲೇ ಈ ಹಂದಿ ಫಾರ್ಮ್ ಕಾರ್ಯಾಚರಿಸುತ್ತಿದ್ದು, ಇದರಿಂದಾಗಿ ದೇವಸ್ಥಾನದ ಪಾವಿತ್ಯಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ.


    ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಹೊಸತೋಟ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಸ್ಥಳೀಯ ವ್ಯಕ್ತಿಯೋರ್ವರು ಹಂದಿಯ ಫಾರ್ಮ್ ಆರಂಭಿಸಿದ್ದು, ಈ ಫಾರ್ಮ್ ಆರಂಭಕ್ಕೆ ಮೊದಲೇ ಸ್ಥಳೀಯರು ಆಕ್ಷೇಪ ಸಲ್ಲಿಸಿದ್ದಾರೆ. ಈ ಸಂಬಂಧ ಸ್ಥಳೀಯ ಗ್ರಾಮಪಂಚಾಯತ್, ಕಂದಾಯ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಹಂದಿ ಫಾರ್ಮ್ ಅನ್ನು ಅಕ್ರಮವಾಗಿ ನಡೆಸುತ್ತಿರುವ ವ್ಯಕ್ತಿಯ ಪರವಾಗಿ ಗ್ರಾಮಪಂಚಾಯತ್ ಆಡಳಿತ ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.


    ತೋಡಿಕಾನದ ಹೊಸತೋಟದ ನಿವಾಸಿಯಾಗಿರುವ ಜಗದೀಶ್ ಎನ್ನುವ ವ್ಯಕ್ತಿ ಕಳೆದ ಎರಡು ತಿಂಗಳ ಹಿಂದೆ ಈ ಹಂದಿ ಫಾರ್ಮ್ ಅನ್ನು ಪ್ರಾರಂಭಿಸಿದ್ದು, ಸುಮಾರು 150 ಕ್ಕೂ ಮಿಕ್ಕಿದ ಹಂದಿಗಳನ್ನು ಇಲ್ಲಿ ಸಾಕಲಾಗುತ್ತಿದೆ. ಈ ಹಂದಿಗಳಿಗೆ ತಿನ್ನಲು ಕೊಳೆತ ವಸ್ತುಗಳನ್ನು ಇಲ್ಲಿ ಶೇಖರಿಸಲಾಗುತ್ತಿದ್ದು, ಇದರ ದುರ್ನಾತದ ಜೊತೆಗೆ ಹಂದಿಗಳಿರುವ ತೊಟ್ಟಿಯನ್ನು ತೊಳೆಯುವ ನೀರಿನ ದುರ್ನಾತ ಇಡೀ ಗ್ರಾಮದ ತುಂಬಾ ಹರಡುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಮನೆ ಮಂದಿಗೆ ಮನೆಯಲ್ಲಿ ಕುಳಿತುಕೊಳ್ಳದಾಗದ ಸ್ಥಿತಿಯೂ ನಿರ್ಮಾಣಗೊಂಡಿದೆ. ಅಲ್ಲದೆ ಹಂದಿ ಫಾರ್ಮ್ ನ ಕೊಳಚೆ ನೀರನ್ನು ಪೈ ಮೂಲಕ ಸಾಗಿಸಿ ತೋಡಿಕಾನದ ಪುರಾತನ ದೇವಸ್ಥಾನವಾದ ಮಲ್ಲಿಕಾರ್ಜುನ ಸ್ವಾಮಿಯ ದರ್ಪಣ ತೀರ್ಥದ ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಒಂದೆಡೆ ನೀರು ಕಲುಷಿತಗೊಳ್ಳುತ್ತಿದ್ದು, ಇನ್ನೊಂದೆಡೆ ಈ ಫಾರ್ಮ್ ನ ಪಕ್ಕದಲ್ಲೇ ಕ್ಷೇತ್ರಕ್ಕೆ ಸಂಬಂಧಪಟ್ಟ ರಕ್ತೇಶ್ವರಿ ದೇವಿ ಹಾಗೂ ನಾಗದೇವರ ಗುಡಿಯಿದ್ದು, ಈ ಫಾರ್ಮ್ ನಿಂದಾಗಿ ಈ ಗುಡಿಗಳು ಅಪವಿತ್ರವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ದೇವಸ್ಥಾನದ ವತಿಯಿಂದಲೂ ಆಕ್ಷೇಪದ ಮನವಿಯನ್ನು ಸಲ್ಲಿಸಲಾಗಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.


    ವೃಂದಾ ಅರಸ್ ಎನ್ನುವ ಮಾಡಲಿಂಗ್ ತಾರೆ ಇದೇ ಕ್ಷೇತ್ರಕ್ಕೆ ಸಂಬಂಧಪಟ್ಟ ದೇವರಗುಂಡಿ ಜಲಪಾತದ ಬಳಿ ಬಿಕಿನಿ ಫೋಟೋ ಶೂಟ್ ಮಾಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ಈ ಕೃತ್ಯದಿಂದ ತೋಡಿಕಾನ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಅಪಚಾರವಾಗಿದೆ ಎಂದು ದೂರಿ ಪ್ರತಿಭಟನೆಯನ್ನೂ ನಡೆಸಿದ್ದರು. ಮುಖ್ಯವಾಗಿ ಹಿಂದೂಪರ ಸಂಘಟನೆಗಳು ಈ ಪ್ರತಿಭಟನೆಯನ್ನು ಕೈಗೊಳ್ಳುವ ಮೂಲಕ ಕ್ಷೇತ್ರಕ್ಕೆ ಅಪಚಾರ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದವು. ಆದರೆ ಇದೀಗ ಸ್ಥಳೀಯರಿಂದಲೇ ದೇವಸ್ಥಾನಕ್ಕೆ ಅಪಚಾರವಾಗುವಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ದರೂ, ಹಿಂದೂಪರ ಸಂಘಟನೆಗಳು ಮೌನವಹಿಸುತ್ತಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೂ ಕಾರಣವಾಗಿದೆ.


    ಹಂದಿ ಫಾರ್ಮ್ ಕಾರ್ಯಾಚರಿಸುತ್ತಿರುವ ಜಾಗವು ಸರಕಾರಿ ಜಾಗವಾಗಿದ್ದು, ಇಲ್ಲಿ ಅಕ್ರಮ ಕಟ್ಟಡವನ್ನೂ ನಿರ್ಮಿಸಲಾಗಿದೆ. ಅಲ್ಲದೆ ಕೃಷಿಗೆ ಸಂಬಂಧಪಟ್ಟ ವಿದ್ಯುತ್ ಸಂಪರ್ಕವನ್ನೂ ಈ ಫಾರ್ಮ್ ಗೆ ಅಳವಡಿಸುವ ಮೂಲಕ ಅಕ್ರಮ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಈ ಸಂಬಂಧ ಈಗಾಗಲೇ ಅರಂತೋಡು ಗ್ರಾಮಪಂಚಾಯತ್ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ಈವರೆಗೂ ಯಾವುದೇ ಕ್ರಮ ಜಾರಿಯಾಗಿಲ್ಲ. ಜನವಸತಿ ಇರುವ ಪ್ರದೇಶದಲ್ಲಿ ಹಂದಿ ಫಾರ್ಮ್ ಪ್ರಾರಂಭಿಸುವ ಮೊದಲು ಸ್ಥಳೀಯರ ಗಮನಕ್ಕೂ ತರದೆ, ಇದೀಗ ಇಡೀ ಊರಿಗೇ ದುರ್ನಾತ ಬೀರುತ್ತಿರುವ ಈ ಹಂದಿ ಫಾರ್ಮ್ ಮುಚ್ಚಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *