LATEST NEWS
ವಾರಾಹಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪೋಟೋಗ್ರಾಫರ್ ಹರೀಶ್ ಮೃತದೇಹ ಪತ್ತೆ

ಕುಂದಾಪುರ, ಜುಲೈ 19: ಕಳೆದ ಎರಡು ದಿನಗಳ ಹಿಂದೆ ಕಂಡ್ಲೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಪೋಟೋಗ್ರಾಫರ್ ಹರೀಶ್ ಮೃತದೇಹ ಗುರುವಾರ ಪತ್ತೆಯಾಗಿದೆ.
ಪತಿಪತ್ನಿ ಕಲಹದ ಹಿನ್ನಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಪೊಲೀಸರು ಬುದ್ದಿವಾದ ಹೇಳಿದ್ದರು. ಬಳಿಕ ಮನೆಗೆ ಹಿಂದಿರುಗುವಾಗ ಹರೀಶ್ ಪತ್ನಿ ಹಾಗೂ ಮನೆಯವರೆದುರಿಗೆ ಹರೀಶ್ ಕಂಡ್ಲೂರು ಸೇತುವೆಯಿಂದ ವಾರಾಹಿ ನದಿಗೆ ಹಾರಿದ್ದರು.

ಬಳಿಕ ನಾಪತ್ತೆಯಾಗಿದ್ದ ಇವರ ಮೃತದೇಹ ನೀರಿನಲ್ಲಿ ಹಾರಿ ಕಾಣೆಯಾದ ಹರೀಶ್ ಅವರ ಹುಡುಕಾಟಕ್ಕೆ ವ್ಯಾಪಕ ಶೋಧ ನಡೆಸಿದ್ದು ಮಳೆ ಹಿನ್ನೆಲೆ ನೀರಿನ ಹರಿವು ಹೆಚ್ಚಿರುವ ಕಾರಣ ಸಾಧ್ಯವಾಗಿರಲಿಲ್ಲ. ಪೊಲೀಸರು, ಅಗ್ನಿ ಶಾಮಕ ದಳದವರು, ಮುಳುಗು ತಜ್ಞರು ಮತ್ತು ಊರಿನವರು ಹುಡುಕಾಡುತ್ತಿರುವಾಗ ಇಂದು ಮಧ್ಯಾಹ್ನದ ಸುಮಾರಿಗೆ ಬಳ್ಕೂರು ಗ್ರಾಮದ ಕಳುವಿನ ಬಾಗಿಲು ಎಂಬಲ್ಲಿ ಹರೀಶ್ ಮೃತದೇಹ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸಿಕ್ಕಿದೆ.
ಹರೀಶ್ ಸಾಂಸಾರಿಕ ಜೀವನದಲ್ಲಿ ಬೇಸರಗೊಂಡೋ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕಂಡ್ಲೂರು ವಾರಾಹಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರಾವುದೇ ಸಂಶಯ ಇರುವುದಿಲ್ಲ ಎಂದು ಸಹೋದರ ಕುಂದಾಪುರ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.