BANTWAL
ಅಕ್ರಮ ಮರಳುಗಾರಿಕೆಗೆ ಬಲಿಯಾದ ರಾಜ್ಯ ಹೆದ್ದಾರಿ ಸೇತುವೆ – ತಪ್ಪಿದ ಭಾರಿ ಅನಾಹುತ

ಅಕ್ರಮ ಮರಳುಗಾರಿಕೆಗೆ ಬಲಿಯಾದ ರಾಜ್ಯ ಹೆದ್ದಾರಿ ಸೇತುವೆ – ತಪ್ಪಿದ ಭಾರಿ ಅನಾಹುತ
ಮಂಗಳೂರು ಜೂನ್ 25: ಭಾರಿ ಮಳೆಗೆ ರಾಜ್ಯ ಹೆದ್ದಾರಿಯ ಸೇತುವೆಯೊಂದು ಕುಸಿದ ಘಟನೆ ಬಂಟ್ವಾಳ ಸಮೀಪ ಮೂಲರಪಟ್ನ ಎಂಬಲ್ಲಿ ನಡೆದಿದೆ.
ಬಂಟ್ವಾಳದಿಂದ ಕುಪ್ಪೆ ಪದವು ಬಿಸಿ ರೋಡ್ ಗೆ ಸಂಪರ್ಕ ಕಲ್ಪಿಸುವ ಮೂಲರಪಟ್ನ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಇದಾಗಿದ್ದು, ಭಾರಿ ಮಳೆ ಹಿನ್ನಲೆ ಇಂದು ಸಂಜೆ ಕುಸಿದು ಬಿದ್ದಿದೆ. ಸೇತುವೆ ಕುಸಿದದ್ದರಿಂದಾಗಿ ಎರಡು ಕಡೆ ಸಂಪರ್ಕ ಇಲ್ಲದಂತಾಗಿದೆ.

ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಿರುವಂತಹ ಈ ಸೇತುವೆ ಕುಸಿಯುವ ಭೀತಿಯಿದ್ದ ವಿಚಾರವನ್ನು ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು. ಸೇತುವೆ ಕುಸಿದು ಬೀಳುವ ಸಂದರ್ಭದಲ್ಲಿ ಯಾವುದೇ ವಾಹನಗಳ ಸೇತುವೆಯಲ್ಲಿ ಸಂಚರಿಸದೇ ಇದ್ದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆ ನಡೆದ ಸ್ಥಳಕ್ಕೆ ಮಾಜಿ ಸಚಿವ ರಮಾನಾಥ ರೈ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸೇತುವೆ ಕೆಳ ಭಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆಯೂ ನಡೆಯುತ್ತಿದ್ದು, ಹಲವು ಬಾರಿ ಈ ಅಕ್ರಮಕ್ಕೆ ಕಡಿವಾಣ ಹಾಕಲಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಅಕ್ರಮ ಮರಳುಗಾರಿಕೆಯನ್ನು ನಡೆಸಲಾಗುತ್ತಿತ್ತು. ಸೇತುವೆ ಕುಸಿದು ಬೀಳಲು ಇದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಬಂಟ್ವಾಳದ ಸೋರ್ನಾಡು ಮೂಲಕ ಮಂಗಳೂರು ಕುಪ್ಪೆಪದವು, ಕೈಕಂಬ, ಕಟೀಲು, ಇರುವೈಲು , ಎಡಪದಲು, ಗಂಜಿಮಠ, ಸುರತ್ಕಲ್ ಸೇರಿದಂತೆ ಹಲವು ಪ್ರದೇಶಗಳಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು.