Connect with us

    BANTWAL

    ಪೆಟ್ರೋಲಿಯಂ ಪೈಪ್ ಲೈನ್ ಗೆ ಕನ್ನ – ಲಕ್ಷಾಂತರ ಮೌಲ್ಯದ ಡಿಸೇಲ್ ಕಳವು

    ಬಂಟ್ವಾಳ ಜುಲೈ 31: ಮಂಗಳೂರು-ಬೆಂಗಳೂರು ನಡುವೆ ಹಾದು ಹೋಗುವ ಪೆಟ್ರೋಲಿಯಂ ಪೈಪ್ ಲೈನ್ ಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳ ಕಳ್ಳತನ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಸೋರ್ಣಾಡು ಎಂಬಲ್ಲಿ ನಡೆದಿದೆ.


    ಇಲ್ಲಿನ ಸೋರ್ಣಾಡು -ಕುಪ್ಪೆಪದವು ಮುಖ್ಯರಸ್ತೆ ನಡುವಿನ ಅರಳ ಗ್ರಾಮದ ಅರ್ಬಿ ಬಳಿ ಹಾದು ಹೋಗಿರುವ ಒಎನ್‌ಜಿಸಿ, ಎಚ್‌ಪಿಸಿಎಲ್ ಸ್ವಾಮ್ಯದ ಪೆಟ್ರೋನೆಟ್ ಸಂಸ್ಥೆ ಮಂಗಳೂರ- ಬೆಂಗಳೂರು ನಡುವೆ ಅಳವಡಿಸಿರುವ ಪೆಟ್ರೋಲ್ ಮತ್ತು ಡೀಸೆಲ್‌ ಪೂರೈಸುವ
    ಪೈಪ್‌ಲೈನ್‌ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ಡೀಸೆಲ್‌ ಕಳವು ಮಾಡಿರುವುದು ಶುಕ್ರವಾರ ಸಂಜೆ ಪತ್ತೆಯಾಗಿದೆ.

    ಸಂತಾನ್ ಪಿಂಟೋ ಅವರ ಪುತ್ರ ಐವನ್ ಪಿಂಟೋ ಅವರ ಜಮೀನಿನಲ್ಲಿ ಪೈಪ್‌ಲೈನ್ ಹಾದು ಹೋಗಿದೆ. 11 ಮೀಟರ್ ಅಂತರದಲ್ಲಿ ಎಚ್‌ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಕೂಡಾ ಹಾದು ಹೋಗಿದೆ. ಈ ಪೈಪ್‌ಲೈನ್ ಮೇಲೆ ಐವನ್ ಪಿಂಟೋ ಅವರು ಮನೆ ಮತ್ತು ಅಡಿಕೆ ತೋಟಕ್ಕೆ ಮಣ್ಣಿನ ರಸ್ತೆ ನಿರ್ಮಿಸಿದ್ದು, ತೋಟದ ಬಳಿ ಡೀಸೆಲ್‌ ಕಳವಿಗಾಗಿ ದುಬಾರಿ ಬೆಲೆಯ ಗೇಟ್ ವಾಲ್ ಅಳವಡಿಸಿರುವುದು ಪತ್ತೆಯಾಗಿದೆ.

    ಇಲ್ಲಿಂದ ಟ್ಯಾಂಕರ್ ಮೂಲಕ ಹಲವು ವರ್ಷಗಳಿಂದ ಡೀಸೆಲ್‌ ಸಾಗಣೆ ನಡೆಯುತ್ತಿದ್ದು, ಇದರಲ್ಲಿ ಕೆಲ ಅಧಿಕಾರಿಗಳು ಅಥವಾ ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿದ್ದಾರೆ. ಈ ಬಗ್ಗೆ ಸಂಶಯಗೊಂಡ ಅಧಿಕಾರಿಗಳು ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಶುಕ್ರವಾರ ಸಂಜೆ ಹಿಟಾಚಿ ಮೂಲಕ ಮಣ್ಣು ಅಗೆದು ನೋಡಿದಾಗ ಸುಮಾರು 1 ಅಡಿ ಆಳದಲ್ಲಿ ಅಕ್ರಮ ಪೈಪ್ ಮತ್ತು ಗೇಟ್ ವಾಲ್ ಅಳವಡಿಸಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *