LATEST NEWS
ದೇಶದ ಕೆಲವು ನಗರಗಳಲ್ಲಿ 90 ರ ಗಡಿ ದಾಟಿದ ಪೆಟ್ರೋಲ್ ಬೆಲೆ
ನವದೆಹಲಿ ಡಿಸೆಂಬರ್ 1: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಲ್ಲೇ ಇದ್ದು, ಇದೀಗ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 90 ರೂಪಾಯಿಗೆ ಏರಿಕೆಯಾಗಿದೆ. ಇದು ಇನ್ನು ಮುಂದುವರೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಕಚ್ಚಾ ತೈಲ ದರದಲ್ಲಿ ಕಳೆದ ಸತತ 4 ವಾರಗಳಿಂದ ಏರಿಕೆಯಾಗುತ್ತಿದ್ದು, ದೇಶಿ ಮಾರುಕಟ್ಟೆಯಲ್ಲೂ ತೈಲ ದರಗಳ ಮೇಲೆ ಪ್ರಭಾವ ಬೀರಿದೆ. ಕೋವಿಡ್-19 ಲಸಿಕೆ ಕುರಿತ ಸಕಾರಾತ್ಮಕ ಬೆಳವಣಿಗೆಗಳು ಮತ್ತು ಸುದ್ದಿಗಳು ತೈಲದ ದರ ಹೆಚ್ಚಿಸಿವೆ. ಜತೆಗೆ ಒಪೆಕ್ ರಾಷ್ಟ್ರಗಳು ಉತ್ಪಾದನೆಯನ್ನು ಕಡಿತಗೊಳಿಸುವ ನಿರೀಕ್ಷೆ ಇದೆ. ಒಂದು ವೇಳೆ ಒಪೆಕ್ ತನ್ನ ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿದರೆ, ಪೆಟ್ರೋಲ್-ಡೀಸೆಲ್ ದರಗಳು ಮತ್ತಷ್ಟು ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 1.17 ರೂ. ವೃದ್ಧಿಸಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 85.09 ರೂಪಾಯಿ ಇದೆ.
ಇನ್ನು ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 90 ರೂಪಾಯಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಮಧ್ಯಪ್ರದೇಶದ ಬೋಪಾಲ್ ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 90.05 ಆಗಿದ್ದು, ಡಿಸೆಲ್ ಪ್ರತಿ ಲೀಟರ್ ಗೆ 80.10 ರೂಪಾಯಿ ಆಗಿದೆ. ಅಲ್ಲದೇ ಇಂದೋರ್ , ಔರಂಗಬಾದ್ ಸೇರಿದಂತೆ ದೇಶದ ಇತರ ಕೆಲವು ಪ್ರದೇಶಗಳಲ್ಲೂ ಪೆಟ್ರೋಲ್ ಬೆಲೆ 90 ರ ಗಡಿ ದಾಟಿದೆ. ಸದ್ಯ ಚಂಡಿಗಢ ನಲ್ಲಿ ಪೆಟ್ರೋಲ್ ಗೆ ದೇಶದಲ್ಲೇ ಅತಿ ಕಡಿಮೆ ಬೆಲೆ ಇದ್ದು, ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 79.28 ರೂಪಾಯಿ ಇದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 47 ಡಾಲರ್‌ಗೆ ಏರಿಕೆಯಾಗಿದೆ. ಕೋವಿಡ್ ಲಸಿಕೆ ಪರಿಣಾಮ ಎಲ್ಲ ಬಗೆಯ ಉತ್ಪಾದನೆ, ಸಾರಿಗೆ, ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿ, ತೈಲಕ್ಕೆ ಬೇಡಿಕೆ ಹೆಚ್ಚಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಿದೆ.