LATEST NEWS
100 ರ ಗಡಿ ದಾಟಿದ ಡಿಸೇಲ್ ಬೆಲೆ…ಪೆಟ್ರೋಲ್ 110 ರ ಗಡಿ

ಮಂಗಳೂರು ಅಕ್ಟೋಬರ್ 17: ತೈಲ ಬೆಲೆ ದೇಶದಲ್ಲಿ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದ್ದು, ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ.
ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು ₹110ರ ಗಡಿಗೆ ಸಮೀಪಸಿದರೆ, ಹೈದರಾಬಾದ್‌ನಲ್ಲಿ ₹110.09 ತಲುಪಿದೆ. ಹಾಗೇ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರವು ₹100 ದಾಟಿದ್ದು, ಪೆಟ್ರೋಲ್ ದರ ₹109.53 ಆಗಿದೆ. ಹೈದರಾಬಾದ್‌ನಲ್ಲಿ ಡೀಸೆಲ್ ₹103.08 ಮುಟ್ಟಿದೆ. ಸತತ ನಾಲ್ಕನೇ ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹105.84 ಮತ್ತು ಡೀಸೆಲ್ ₹94.57 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 34 ಪೈಸೆ ಹೆಚ್ಚಳವಾಗಿ ₹111.77 ಮತ್ತು ಡೀಸೆಲ್ 37 ಪೈಸೆ ಹೆಚ್ಚಳವಾಗಿ ₹102.52 ಆಗಿದೆ.

ಇಂಧನ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ.