LATEST NEWS
ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವಕ್ಕೆ ಪೊಲೀಸರ ಮಾರ್ಗಸೂಚಿ
ಮಂಗಳೂರು ಸೆಪ್ಟೆಂಬರ್ 02 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಮತ್ತು ಮೊಸರು ಕುಡಿಕೆ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಈ ಹಿನ್ನಲೆ ಮುಂಜಾಗೃತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಮಾರ್ಗಸೂಚಿ ಹೊರಡಿಸಿದ್ದಾರೆ.
ಕಾರ್ಯಕ್ರಮ ಆಯೋಜಿಸುವವರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಮಡಕೆಗಳನ್ನು 14 ಅಡಿ ಎತ್ತರದವರೆಗೆ ಮಾತ್ರ ಕಟ್ಟಬೇಕು. ಮಡಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಟ್ಟಬಾರದು. ಮಡಕೆ ಒಡೆಯುವ ಸ್ವಯಂಸೇವಕರ ಮೇಲೆ ತಂಪು ನೀರನ್ನು ಚೆಲ್ಲಬಾರದು ಎಂಬ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್ ಜೈನ್, ಶ್ರೀಕೃಷ್ಣ ಜನ್ಮಾಷ್ಟಮಿ ಸಾಂಪ್ರದಾಯಿಕವಾಗಿ ಆಚರಿಸುವುದರೊಂದಿಗೆ ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಮಾರ್ಗಸೂಚಿ ನೀಡಲಾಗಿದ್ದು, ಸಂಘಟಕರು ಈ ಬಗ್ಗೆ ಗಮನಹರಿಸಬೇಕು. ಪೊಲೀಸ್ ಇಲಾಖೆಯಿಂದ ನೀಡಲಾದ ಪರವಾನಗಿಯಲ್ಲಿ ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಡಿ.ಜೆ. ಬಳಸಲು ಅವಕಾಶವಿಲ್ಲ. ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಸ್ಫಷ್ಟಪಡಿಸಿದ್ದಾರೆ.
- ಮಡಕೆಗಳನ್ನು ಕಟ್ಟುವಾಗ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು.
- ಪೊಲೀಸ್ ಇಲಾಖೆಯಿಂದ ಅಂತಿಮಗೊಳಿಸಲಾದ ರೂಟ್‌ನಲ್ಲಿ ಮಾತ್ರ ಮೆರವಣಿಗೆ ಸಾಗಬೇಕು.
- ಮಡಕೆ ಕಟ್ಟುವಾಗ, ಸ್ತಬ್ಧಚಿತ್ರ ತಯಾರಿಸುವಾಗ ಸ್ಥಳದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೆರವಣಿಗೆಯಲ್ಲಿ ಒಂದು ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಬೇಕು.
- ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಅನಂತರ ಸುಡುಮದ್ದು/ಪಟಾಕಿಗಳನ್ನೂ ಬಳಸುವಂತಿಲ್ಲ.
- ಫಿಟ್‌ನೆಸ್ ಸರ್ಟಿಫಿಕೇಟ್, ಇನ್ಶೂರೆನ್ಸ್ ಸರ್ಟಿಫಿಕೇಟ್ ಇರುವ ವಾಹನಗಳಲ್ಲಿ ಮಾತ್ರ ಸ್ತಬ್ಧ ಚಿತ್ರವನ್ನು ಅಳವಡಿಸಬೇಕು. ಸ್ವಯಂಸೇವಕರನ್ನು ಗುಂಪುಗಳಾಗಿ ವಿಂಗಡಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜಿಸಿ ಮೆರವಣಿಗೆಯು ಸುಲಲಿತವಾಗಿ ಸಾಗುವಂತೆ ಮಾಡಬೇಕು.
- ಯಾವುದೇ ಧರ್ಮ, ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಹ ಟ್ಯಾಬ್ಲೋ, ನೃತ್ಯರೂಪಕ ಇರಬಾರದು.
- ಆಸ್ಪತ್ರೆಗಳ ಬಳಿ, ಜನಸಂದಣಿಯ ಮಧ್ಯೆ ಸುಡುಮದ್ದು ಬಳಸಬಾರದು.
- ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವ ಪೂರ್ವದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.
- ಯಾವುದೇ ಪ್ರಚೋದನಾತ್ಮಕ ಬರಹಗಳು, ಚಿತ್ರಗಳನ್ನು ಬಳಸಬಾರದು. ಕಾರ್ಯಕ್ರಮ ಮುಗಿದ ಕೂಡಲೇ ಸಂಘಟಕರೇ ಕಡ್ಡಾಯವಾಗಿ ತೆರವುಗೊಳಿಸಬೇಕು.