LATEST NEWS
ದೇಯಿ ಬೈದೆದಿ ಪುತ್ಥಳಿ ಶುದ್ದೀಕರಣಕ್ಕೆ ಅನುಮತಿ ನಿರಾಕರಿಸಿದ ಅರಣ್ಯ ಇಲಾಖೆ
ಪುತ್ತೂರು ಸೆಪ್ಟೆಂಬರ್ 12: ತುಳುನಾಡಿನ ಕಾರ್ಣಿಕ ಪುರುಷರು ಹಾಗೂ ವೀರ ಪುರುಷರಾದ ಕೋಟಿ-ಚೆನ್ನಯ್ಯ ರ ಜನ್ಮಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೆದಿಗೆ ಪುತ್ಥಳಿಗೆ ಅವಮಾನ ಮಾಡಿದ ಹಿನ್ನಲೆಯಲ್ಲಿ ದೇಯಿಬೈದೆದಿ ಪುತ್ಥಳಿ ಸ್ವಚ್ಚ ಕಾರ್ಯಕ್ಕೆ ಮುಂದಾದ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳಿಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದೆ.
ಈಶ್ವರಮಂಗಲದ ನಿವಾಸಿ ಹನೀಫ್ ಎನ್ನುವ ಯುವಕ ಅರಣ್ಯ ಇಲಾಖೆಯು ನಿರ್ಮಿಸಿರುವ ಔಷಧೀಯ ವನದಲ್ಲಿ ನಿರ್ಮಿಸಿರುವ ದೇಯಿ ಬೈದೆದಿಯ ಪುತ್ಥಳಿಯ ಪಕ್ಕದಲ್ಲಿ ಕೂತು ಪುತ್ಥಳಿಯ ಎದೆಯನ್ನು ಮುಟ್ಟುವ ಅನಾಗರಿಕ ವರ್ತನೆಯನ್ನು ತೋರಿ ಹಾಗೂ ಆ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಈ ಹಿನ್ನಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಬಿಲ್ಲವ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಆರೋಪಿಯ ಬಂಧನವಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಸಾರ್ವಜನಿಕರ ಹಾಗೂ ಹಿಂದೂ ಸಂಘಟನೆಗಳಿಂದ ದೇಯಿಬೈದೆದಿ ಪಾರ್ಕ್ ನಲ್ಲಿರುವ ಪುತ್ಥಳಿಗೆ ಹಾಲು ಮತ್ತು ಶಿಯಾಳ ಅಭಿಷೇಕ ನಡೆಸಲು ಮುಂದಾಗಿದ್ದಾರೆ. ಆದರೆ ಅರಣ್ಯ ಇಲಾಖೆಯಿಂದ ಅನುಮತಿ ನಿರಾಕರಿಸಿದೆ. ಇದರಿಂದ ಕೋಪಗೊಂಡ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ದೇಯಿಬೈದೆದಿ ಔಷಧಿ ವನದ ಮುಂಭಾಗದಲ್ಲಿ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 100ಕ್ಕೂ ಮಿಕ್ಕಿ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.