BANTWAL
ಯುದ್ದ ಪೀಡಿತ ಇಸ್ರೇಲ್ ನಲ್ಲಿ ದಕ್ಷಿಣ ಕನ್ನಡ ಬಂಟ್ವಾಳದ ಎಲ್ಲರೂ ಸೇಫ್..!
ಯುದ್ದ ಪೀಡಿತ ಇಸ್ರೇಲ್ ನಲ್ಲಿ ದ.ಕ.ಜಿಲ್ಲೆಯ ಹಲವಾರು ಮಂದಿ ನೆಲೆಸಿದ್ದು,ಅದರಲ್ಲಿ ಬಂಟ್ವಾಳ ತಾಲೂಕಿನವರು ಇದ್ದಾರೆ.
ಈ ಪೈಕಿ ಪಿಲಾತಬೆಟ್ಟು ಗ್ರಾಮದ 10 ಮಂದಿಯ ಮಾಹಿತಿ ಸದ್ಯ ದೊರಕಿದೆ.
ಬಂಟ್ವಾಳ: ಯುದ್ದ ಪೀಡಿತ ಇಸ್ರೇಲ್ ನಲ್ಲಿ ದ.ಕ.ಜಿಲ್ಲೆಯ ಹಲವಾರು ಮಂದಿ ನೆಲೆಸಿದ್ದು,ಅದರಲ್ಲಿ ಬಂಟ್ವಾಳ ತಾಲೂಕಿನವರು ಇದ್ದಾರೆ.
ಈ ಪೈಕಿ ಪಿಲಾತಬೆಟ್ಟು ಗ್ರಾಮದ 10 ಮಂದಿಯ ಮಾಹಿತಿ ಸದ್ಯ ದೊರಕಿದೆ.
ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ನಿವಾಸಿಗಳಾದ ಅನಿಲ್, ಫ್ರಾನ್ಸಿಸ್ ಡಿ.ಸೋಜ, ಅವರ ಸಹೋದರ ವಿನ್ಸೆಂಟ್ ಡಿ.ಸೋಜ,ಅವರ ಪತ್ನಿ ಜೆಸಿಂತಾ ಪಿರೇರಾ,ದಯಾನಂದ ಹಾಗೂ ದೈಕಿನಕಟ್ಟೆಯ ಕಿರಣ್ ಹೆಗ್ಡೆ ಮತ್ತು ನಯನಾಡಿನ ವಿಜೇತ್ ಹೆಗ್ಡೆ,ಬೆಂಕಿನಡ್ಕ ಒಂದೇ ಮನೆಯ ಸಹೋದರರಾದ ನೆಲ್ಸನ್ ಮತ್ತು ವಿಲ್ಸನ್ ಪ್ರಸ್ತುತ ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇವರ ಜೊತೆ ಕಲ್ಲಡ್ಕ ಹಾಗೂ ಮಡಂತ್ಯಾರಿನ ಅನೇಕರು ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇವರಲ್ಲಿ ಆರು ಮಂದಿ ಕೂಡ ಅರ್ಜಿಲಿಯಾ ಪಿತುವಾ ಎಂಬ ಪಟ್ಟಣ ಪ್ರದೇಶದಲ್ಲಿ ನರ್ಸಿಂಗ್ ಉದ್ಯೋಗದಲ್ಲಿದ್ದಾರೆ.
ಇವರ ಮನೆಮಂದಿಯನ್ನು ಸಂಪರ್ಕಿಸಿದಾಗ ಯುದ್ದ ಪ್ರದೇಶದಿಂದ ಇವರಿರುವ ಸ್ಥಳ ಸುಮಾರು 70 ಕಿ.ಮೀ.ದೂರದಲ್ಲಿದ್ದು, ಯಾವುದೇ ಭಯದ ವಾತಾವರಣವಿಲ್ಲ ಎಂದು ತಿಳಿಸಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.
ಈ ಪೈಕಿ ದೈಕಿನಕಟ್ಟೆ ನಿವಾಸಿಯಾಗಿರುವ ಮಾದವ ಹೆಗ್ಡೆ ಅವರ ಪುತ್ರ ಕಿರಣ್ ಹೆಗ್ಡೆ ಅವರು ದೂರವಾಣಿ ಮೂಲಕ ಮಾತನಾಡಿ, ಸದ್ಯ ನಾವಿರುವ ಸ್ಥಳದಲ್ಲಿ ಯುದ್ಧದ ಯಾವುದೇ ಆತಂಕವಿಲ್ಲ, ನಾವು ಯಥಾ ರೀತಿಯಲ್ಲಿ ಉದ್ಯೋಗದಲ್ಲಿ ನಿರತರಾಗಿದ್ದೇವೆ.
ಈ ಬಗ್ಗೆ ನಿತ್ಯ ಊರಿನಿಂದ ಮನೆಯವರ ಸಹಿತ ಅನೇಕ ಬಂಧುಮಿತ್ರರು ದೂರವಾಣಿ ಮೂಲಕ ವಿಚಾರಿಸುವುದಲ್ಲದೆ,ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಯುದ್ಧದ ತೀವ್ರತೆ ಅತಿಯಾದ ಸಂದರ್ಭದಲ್ಲಿ ಊರಿಗೆ ಮರಳುವ ಯೋಚನೆಯಲ್ಲಿದ್ದೇವೆ ಎಂದು ಕಿರಣ್ ತಿಳಿಸಿದ್ದಾರೆ.
ಪುಂಜಾಲಕಟ್ಟೆ ನಿವಾಸಿ ಪ್ರಾನ್ಸಿಸ್ ಅವರು ದೂರವಾಣಿ ಮೂಲಕ ಮಾತನಾಡಿ, ಅರ್ಜೈಲೇಯಿದಲ್ಲಿ ಕರ್ನಾಟಕದ ಸುಮಾರು 12 ಸಾವಿರ ಮಂದಿ ಇದ್ದು, ಅದರಲ್ಲಿ ಸುಮಾರು 9 ಸಾವಿರ ಮಂದಿ ದ.ಕ.ಉಡುಪಿ ಜಿಲ್ಲೆಯವರಾಗಿದ್ದಾರೆ.
ಪ್ರತಿ ಗಂಟೆಗೊಮ್ಮೆ ಇಲ್ಲಿನ ಮಿಲಿಟರಿ ಪಡೆಯವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡುತ್ತಿದ್ದು, ಮಾಹಿತಿಯನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ.
ಎಲ್ಲರೂ ಕ್ಷೇಮವಾಗಿದ್ದಾರೆ, ನಾವು ಪ್ರತಿನಿತ್ಯ ಊರಿನ ಪ್ರತಿಯೊಂದು ವಿಚಾರಗಳನ್ನು ಮಾದ್ಯಮಗಳ ಮೂಲಕ ತಿಳಿಯುತ್ತೇವೆ ಎಂದು ತಿಳಿಸಿದರು.
ಅಂತಹ ಸಂದಿಗ್ಧ ಸಮಯ ಬಂದರೆ ಭಾರತದ ರಾಯಭಾರಿ ಕಚೇರಿ ಮೂಲಕ ಭಾರತಕ್ಕೆ ಬರಲು ವ್ಯವಸ್ಥೆ ಕಲ್ಪಿಸುವ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಯಾವುದೇ ಭಯವಿಲ್ಲ, ನಿನ್ನೆ ಬೆಳಿಗ್ಗೆ ಒಮ್ಮೆ ಮಾತ್ರ ಸೈರನ್ ಹಾಕಿದ್ದು,ಬಿಟ್ಟರೆ ಉಳಿದಂತೆ ಯಾವುದೇ ರೀತಿಯ ಯುದ್ಧದ ವಾತಾವರಣ ಕಂಡು ಬಂದಿಲ್ಲ.
ಆದರೆ ಭಯೋತ್ಪಾದಕರು ಒಳಗಡೆ ನುಸುಳಿದ್ದು, ಅವರ ಬಗ್ಗೆ ಸ್ವಲ್ಪ ಹೆದರಿಕೆಯಿದೆ,ಆದರೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಇಲ್ಲಿನ ನಾಗರಿಕರ ಮೇಲೆ ಸರಕಾರ ತುಂಬಾ ಹೆಚ್ಚಿನ ರೀತಿಯಲ್ಲಿ ನಿಗಾ ವಹಿಸಿಕೊಂಡಿದೆ.ಹಾಗಾಗಿ ಯಾವುದೇ ತೊಂದರೆಯಿಲ್ಲ.ಸದ್ಯ ಶಾಲೆಗಳಿಗೆ ರಜೆ ನೀಡಿದ್ದಾರೆ.
ಕೆಲಸಕ್ಕೆ ಹೋಗುವವರು ಆರಾಮವಾಗಿ ಹೋಗಲು ಅವಕಾಶ ನೀಡಲಾಗಿದೆ. ಅಲ್ಲಲ್ಲಿ ಮಿಲಿಟರಿ ಫೋರ್ಸ್ ಹಾಕಿದ್ದಾರೆ ಎಂಬ ಮಾಹಿತಿಯನ್ನು ಕಾರ್ಕಳದ ಸ್ನೇಹಿರೋರ್ವರು ತಿಳಿಸಿದ್ದಾರೆ.