LATEST NEWS
ಫೆಂಗಲ್ ಚಂಡಮಾರುತ ಅಬ್ಬರ – ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಮಂಗಳೂರು ಡಿಸೆಂಬರ್ 01: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದ ಪ್ರಭಾವ ಕರ್ನಾಟಕದ ಕರಾವಳಿಗೂ ತಟ್ಟಿದೆ. ಈಗಾಗಲೆ ಫೆಂಗಲ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದು, ಭಾೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ನಡುವೆ ಕರ್ನಾಟಕದಲ್ಲೂ ಡಿಸೆಂಬರ್ 3 ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಳೆನಾಡು ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೆ ಗುಡುಗು ಸಿಡಿಲು ಸಹಿತ ಮಳೆಯಾಗಲಿದೆ. ಗಾಳಿ ಗಂಟೆಗೆ 90 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆಯಾಗುವ ಸಂಭವ ಇದೆ.
ಫೆಂಗಲ್ ಚಂಡಮಾರುತ ಪರಿಣಾಮ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಸಮುದ್ರ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಡದೋಣಿಗಳು ಸಮುದ್ರ ತೀರದಲ್ಲಿ ಲಂಗರು ಹಾಕಿವೆ.