LATEST NEWS
ಅಯೋಧ್ಯೆ ತೀರ್ಪು ಸಂತಸ ತಂದಿದ್ದು ಜೀವನದ ಬಹುದೊಡ್ಡ ಅಪೇಕ್ಷೆ ಈಡೇರುತ್ತಿದೆ – ಪೇಜಾವರ ಶ್ರೀ
ಅಯೋಧ್ಯೆ ತೀರ್ಪು ಸಂತಸ ತಂದಿದ್ದು ಜೀವನದ ಬಹುದೊಡ್ಡ ಅಪೇಕ್ಷೆ ಈಡೇರುತ್ತಿದೆ – ಪೇಜಾವರ ಶ್ರೀ
ಉಡುಪಿ ನವೆಂಬರ್ 9: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಸಂತಸ ತಂದಿದ್ದು, ರಾಮಮಂದಿರ ನಿರ್ಮಾಣವಾಗಬೇಕು ಎಂಬ ಜೀವನದ ಬಹುದೊಡ್ಡ ಅಪೇಕ್ಷೆ ಈಡೇರುತ್ತಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪೇಜಾವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪೇಜಾವರ ಶ್ರೀಗಳು ಹಿಂದೂಗಳಿಗೆ ರಾಮಜನ್ಮಭೂಮಿಯ ಸ್ಥಳ ಮುಖ್ಯವಾದರೆ, ಮುಸ್ಲಿಮರಿಗೆ ಮಸೀದಿ ಮುಖ್ಯವಾಗಿತ್ತು. ಈ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮುಸ್ಲಿಮರಿಗೆ ಹಾನಿಯಾಗಿಲ್ಲ. ಹಿಂದೂಗಳ ನಂಬಿಕೆಯ ಕೇಂದ್ರವಾದ ರಾಮಜನ್ಮಭೂಮಿ ಹಿಂದೂಗಳಿಗೆ ಸಿಕ್ಕರೆ, ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಯೋಗ್ಯವಾದ ಸ್ಥಳ ಸಿಗಲಿದೆ ಎಂದರು.
ಮುಂದೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಕಾರ ನೀಡಲಿ, ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕಾರ ನೀಡಲಿದ್ದಾರೆ. ಈ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸೌಹಾರ್ದದ ಹೊಸ ಯುಗ ಆರಂಭವಾಗಲಿ ಎಂದು ಸ್ವಾಮೀಜಿ ಆಶಿಸಿದರು.
ಎಲ್ಲರೂ ಸಮಚಿತ್ತದಿಂದ ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಬೇಕು. ಹಿಂದೂಗಳು ಸಾರ್ವಜನಿಕವಾಗಿ ವಿಜಯೋತ್ಸವ, ಮೆರವಣಿಗೆ, ಸಂಭ್ರಮಾಚರಣೆ ಮಾಡಬಾರದು. ಮುಸ್ಲಿಮರು ಉದ್ರೇಕಗೊಳ್ಳದೆ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು. ಸಮಾಜದಲ್ಲಿ ಶಾಂತಿ ನೆಲೆಸಲು ಉಭಯ ಸಮುದಾಯಗಳು ಸಹಕರಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಭಾನುವಾರ ದೆಹಲಿಯಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್‌ನ ಸಭೆಯಲ್ಲಿ ಭಾಗವಹಿಸುತ್ತೇನೆ. ಹಿಂದೂ ಹಾಗೂ ಮುಸ್ಲಿಂ ಸಂತರು ಸಭೆಯಲ್ಲಿ ಭಾಗವಹಿಸಿ ಸಮಾಜಕ್ಕೆ ಶಾಂತಿ ಸಂದೇಶ ನೀಡಲಿದ್ದಾರೆ. ಅಯೋಧ್ಯೆಗೆ ಭೇಟಿ ನೀಡುವ ಉದ್ದೇಶವಿಲ್ಲ ಎಂದರು.