UDUPI
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ಮುದ್ದಾಡುತ್ತಿರುವ ಪುಟ್ಟಕರು….!!

ಉಡುಪಿ ಜಲೈ 22: ಪೇಜಾವರ ಶ್ರೀಗಳ ಗೋಪ್ರೀತಿ ಎಲ್ಲರಿಗೂ ಗೊತ್ತಿದೆ. ಪುಟ್ಟಕರುವೊಂದು ಸ್ವಾಮೀಜಿಯನ್ನು ಪ್ರೀತಿಯಿಂದ ಮುದ್ದಾಡುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ನೀಲಾವರ ಗೋಶಾಲೆಯಲ್ಲಿರುವ ಸಾವಿರಕ್ಕೂ ಹೆಚ್ಚು ಗೋವುಗಳ ಲಾಲನೆ ಪಾಲನೆ ಯಲ್ಲೇ ಸ್ವಾಮೀಜಿ ಸದಾಕಾಲ ತೊಡಗಿರ್ತಾತೆ. ಅಕ್ಷರಷ: ತಾವೇ ಗೋವಿಗೆ ಮೇವು ಕೊಟ್ಟು ಸೆಗಣಿ ಬಾಚುತ್ತಾರೆ. ಗೋವುಗಳಿಗೆ ಸ್ನಾನ ಮಾಡಿಸಿ ಗೋಶಾಲೆ ತೊಳೆಯುತ್ತಾರೆ.
ಇಂತಹಾ ಸ್ವಾಮೀಜಿಯನ್ನು ಕಂಡ್ರೆ ಗೋವುಗಳಿಗೂ ತುಂಬಾನೇ ಪ್ರೀತಿ. ಸ್ವಾಮೀಜಿ ಗೋಶಾಲೆಗೆ ಬರುತ್ತಿದ್ದಂತೆ ಅವರನ್ನು ಸುತ್ತುವರಿಯೋದು ಸಾಮಾನ್ಯ. ಕೋರೋನಾ ಬಂದ ಕಾರಣಕ್ಕೆ ವಿಶ್ವಪ್ರಸನ್ನ ತೀರ್ಥರು ಈ ಬಾರಿ ಗೋಶಾಲೆಯಲ್ಲೇ ಚಾತುರ್ಮಾಸ್ಯ ವೃತ ಕೈಗೊಂಡಿದ್ದಾರೆ. ನಿತ್ಯವೂ ನೀಲಾವರದ ಗೋಶಾಲೆಯಲ್ಲೇ ವಾಸ, ಪೂಜೆ ಪ್ರವಚನ ಕೈಗೊಳ್ಳುತ್ತಾರೆ.

ಸಂಜೆ ಪ್ರವಚನದ ವೇಳೆಯಲ್ಲಿ ಕರುವೊಂದು ಬಂದು ಸ್ವಾಮೀಜಿಯನ್ನು ಮುದ್ದಾಡುವ ದೃಶ್ಯ ನೀವಿಲ್ಲಿ ಕಾಣಬಹುದು. ಕೈಜೋಡಿಸಿ ಕುಳಿತ ಸ್ವಾಮೀಜಿಯ ಎರಡೂ ಕರಗಳನ್ನು ನೆಕ್ಕಿ ಬಳಿಕ ಕೆನ್ನೆ ಗೆ ಮುತ್ತಿಟ್ಟು ಮುದ್ದಾಡುವ ಈ ದೃಶ್ಯ ಮೂಕಪ್ರಾಣಿಯು ಯಾವ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಈ ಅನಿರೀಕ್ಷಿತ ಸ್ಪರ್ಶ ದಿಂದ ಸ್ವಲ್ಪವೂ ವಿಚಲಿತರಾಗದ ಸ್ವಾಮೀಜಿ ತಮ್ಮ ಪ್ರವಚನ ಮುಂದುವರಿಸಿದ್ದಾರೆ. ಗೋ ಶಾಲೆಯಲ್ಲಿ ನಿತ್ಯವೂ ಇಂತಹಾ ಮನಮೋಹಕ ಘಟನೆಗಳು ನಡೆಯುತ್ತಿದ್ದರೂ ಇದೇ ಮೊದಲ ಬಾರಿಗೆ ಹೀಗೊಂದು ದೃಶ್ಯ ಕೆಮರಾ ಕಣ್ಣಿಗೆ ಕಾಣಸಿಕ್ಕಿದೆ. ಅಕ್ರಮ ಗೋಸಾಗಾಟದ ವೇಳೆ ಸಿಕ್ಕಿದ ಹಸುಗಳು, ಗೊಡ್ಡುದನಗಳು, ಗಾಯಾಳು ದನಗಳನ್ನೇ ಸಲಹುವ ಸ್ವಾಮೀಜಿಗೆ ಇದಕ್ಕಿಂತ ದೊಡ್ಡ ಕೃತಜ್ಞತಾ ಭಾವ ಸಿಕ್ಕೀತೇ ಹೇಳಿ….