LATEST NEWS
ಮಳಲಿ ಮಸೀದಿ ವಿವಾದ ಸೌಹಾರ್ದ ಮುಕ್ತಾಯಕ್ಕೆ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಸಭೆ
ಮಂಗಳೂರು ಮೇ 30 : ರಾಜ್ಯದಲ್ಲಿ ಭಾರೀ ವಿವಾದವೆಬ್ಬಿಸಿರುವ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆದಿದೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಮಳಲಿ ಮಸೀದಿಯ ಆಡಳಿತ ಮಂಡಳಿ, ಹಿಂದೂ ಸಂಘಟನೆಯ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಬಳಿಕ ಮಾತನಾಡಿದ ಅವರು, ಈ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಎಸ್‌ಡಿಪಿಐ ಸಮಾವೇಶದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಎಲ್ಲರ ಸಹಕಾರವಿದ್ದರೆ ಮಾತುಕತೆಯಿಂದಲೇ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದರು.
ಇನ್ನು 400 ವರ್ಷಗಳಿಂದ ನಮಗೆ ಇದರ ಇತಿಹಾಸ ತಿಳಿದಿದ್ದು, ನಾವು ನಮ್ಮ ಧಾರ್ಮಿಕ ಆಚರಣೆ ಮಾಡಿ ಕೊಂಡು ಬರುತ್ತಿದ್ದೇವೆ. ಪಾರಂಪರಿಕವಾಗಿ ಬಂದ ಬಗ್ಗೆಯೂ ಹಿರಿಯರ ಮಾತಿನಂತೆ ದಾಖಲೆ ಇರಿಸಿ ಕೊಂಡಿದ್ದೇವೆ ಎಂದು ಮಸೀದಿ ಆಡಳಿತ ಸಮಿತಿಯ ಪ್ರಮುಖರು ಮಾಹಿತಿ ನೀಡಿದ್ದಾರೆ.
ವಿಎಚ್‌ಪಿ ಬಜರಂಗದಳ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ನಾವು ನಮ್ಮ ಧಾರ್ಮಿಕ ನಂಬಿಕೆಯಂತೆ ತಾಂಬೂಲ ಪ್ರಶ್ನೆ ಮಾಡಿದ್ದು, ಯಾವುದೇ ಕಾರಣಕ್ಕೂ ಇತರರ ಪ್ರಚೋದನೆಗೆ ಒಳಗಾಗಿ ಸಂಘರ್ಷಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. ಮಳಲಿಯ ಹಿಂದೂ, ಮುಸ್ಲಿಂ ಸಮುದಾಯ, ಆಡಳಿತ ಸಮಿತಿ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ ಎಂದು ಹೇಳಿದ್ದಾರೆ.