DAKSHINA KANNADA
ಶೀಮತಿ ಅರುಣ ಜಿ ಭಟ್ ಅವರ ”ಪಯಸ್ವಿನಿ” ಕಥಾ ಸಂಕಲನ ಮತ್ತು “ಚಂಪಕಮಾಲ” ಕಾದಂಬರಿ ಲೋಕಾರ್ಪಣೆ
ವಿಟ್ಲ: ಮುಳಿಯ ದಂಬೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶೀಮತಿ ಅರುಣ ಜಿ ಭಟ್ ಅವರ ”ಪಯಸ್ವಿನಿ” ಕಥಾ ಸಂಕಲನ ಮತ್ತು “ಚಂಪಕಮಾಲ” ಕಾದಂಬರಿ ಲೋಕಾರ್ಪಣೆಗೊಂಡವು.
ಕೃತಿಗಳು ಲೇಖಕನ ನೋವನ್ನು ಮರೆಯುವ ಸಾಧನವಾಗುವ ಜತೆಗೆ ಇನ್ನೊಬ್ಬರ ನೋವನ್ನು ಮರೆಸುವ ಕಾರ್ಯವಾಗಬಹುದು. ಜೀವನ ಅನುಭವ ಎಂದು ಎಲ್ಲಕ್ಕಿಂತ ಮುಖ್ಯವಾಗಿದ್ದು, ಜೀವನದ ನೋವುಗಳ ನಡುವೆಯೂ ಕೃತಿಗಳನ್ನು ನೀಡಿರುವುದು ಉತ್ತಮ ವಿಚಾರವಾಗಿದೆ. ಕೃತಿಕಾರನ ಕಥನ ಶಕ್ತಿಯನ್ನು ಬರವಣಿಗೆಯ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಎ.ಸುಬ್ಬಣ್ಣ ರೈ ಹೇಳಿದರು.
ಮುಳಿಯ ದಂಬೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಮುಳಿಯ ರಜತಾದ್ರಿ ಆಯುರ್ವೇದ ಸೇವಾ ಟ್ರಸ್ಟ್ ಪ್ರಕಾಶನದಲ್ಲಿ ಅರುಣಾ ಜಿ. ಭಟ್ ಬದಿಕೋಡಿ ಅವರ ಚೊಚ್ಚಲ ಕೃತಿಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂತ ಅಲೋಶಿಯಸ್ ಕಾಲೇಜು ನಿವೃತ್ತ ಉಪನ್ಯಾಸಕಿ ಡಾ. ಸರಸ್ವತಿ ಕುಮಾರಿ ಮಾತನಾಡಿದರು. ಪುಸ್ತಕ ಪಯಸ್ವಿನಿಯನ್ನು ವಿಟ್ಲ ವಕೀಲ ನಟೇಶ ವಿಟ್ಲ ಲೋಕಾರ್ಪಣೆ ಮಾಡಿದರು. ಪುಸ್ತಕ ಚಂಪಕ ಮಾಲಾವನ್ನು ನಿವೃತ್ತ ಶಿಕ್ಷಕ ಬಾಲ ಮಧುರ ಕಾನನ ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕೆ ಮೊದಲು ಪದ್ಯಾಣ ಗಣಪತಿ ಭಟ್ ಹಾಗೂ ಮುಳಿಯ ಶಂಕರ ಭಟ್ ಅವರಿಂದ ಕಾವ್ಯ ವಾಚನ ನಡೆಯಿತು.
ಯಕ್ಷಗಾನ ಅರ್ಥಧಾರಿ ಹರೀಶ ಬಳಂತಿಮುಗೇರು, ಕೃತಿಕಾರರಾದ ಅರುಣಾ ಜಿ.ಭಟ್, ಕುಸುಮಾ ಜಿ. ಕೆ.ಭಟ್, ನವೀನ್ ಕೃಷ್ಣ, ರೇಷ್ಮಾ, ಸಹನ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಮುಳಿಯ ರಜತಾದ್ರಿ ಆಯುರ್ವೇದ ಸೇವಾ ಟ್ರಸ್ಟ್ ನ ಮುಳಿಯ ಶಂಕರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಚಿನ್ ಕೃಷ್ಣ ವಂದಿಸಿದರು. ಗೋಪಾಲಕೃಷ್ಣ ಭಟ್ ಬದಿಕೋಡಿ ಕಾರ್ಯಕ್ರಮ ನಿರೂಪಿಸಿದರು.