DAKSHINA KANNADA
ಮರ ತೆರವುಗೊಳಿಸುವ ನೆಪದಲ್ಲಿ ಪೆರಿಯಶಾಂತಿಯಲ್ಲಿ ಪ್ರಯಾಣಿಕರ ದರೋಡೆ

ಮರ ತೆರವುಗೊಳಿಸುವ ನೆಪದಲ್ಲಿ ಪೆರಿಯಶಾಂತಿಯಲ್ಲಿ ಪ್ರಯಾಣಿಕರ ದರೋಡೆ
ಪುತ್ತೂರು,ಮಾರ್ಚ್ 20: ರಸ್ತೆಗೆ ಬಿದ್ದ ಮರವೊಂದು ತೆರವುಗೊಳಿಸುವ ನೆಪದಲ್ಲಿ ಕೆವು ಪುಂಡರು ಪ್ರಯಾಣಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡಿ ಸುಲಿಗೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪೆರಿಯ ಶಾಂತಿಯಲ್ಲಿ ನಡೆದಿದೆ.
ವಾಯುಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಾದ್ಯಂತ ಭಾರೀ ಮಳೆ ಹಾಗೂ ಗಾಳಿ ಬೀಸುತ್ತಿದೆ.

ಈ ಮಳೆ ಹಾಗೂ ಗಾಳಿಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಭಾರೀ ನಷ್ಟವೂ ಸಂಭವಿಸಿದೆ.
ಸೋಮವಾರವೂ ಮಳೆ ಹಾಗೂ ಗಾಳಿಯ ಆರ್ಭಟ ಜಾಸ್ತಿಯಾಗಿತ್ತು. ಭಾರೀ ಮಳೆ ಹಾಗೂ ಗಾಳಿಗೆ ಪುತ್ತೂರು ತಾಲೂಕಿನ ಪೆರಿಯಶಾಂತಿ-ಧರ್ಮಸ್ಥಳ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದಿತ್ತು.
ಇದನ್ನು ತೆರವುಗೊಳಿಸುವ ನೆಪದಲ್ಲಿ ಈ ರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ರಸ್ತೆಯಲ್ಲಿ ತೆರಳುವ ವಾಹನಗಳಿಂದ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸಿದ್ದಾರೆ.
ರಸ್ತೆಯಲ್ಲಿ ಬರುವ ಪ್ರತಿಯೊಂದು ವಾಹನವನ್ನೂ ಅಡ್ಡಗಟ್ಟಿ ಬಲಾತ್ಕಾರವಾಗಿ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಹಣ ನೀಡದ ವಾಹನ ಚಾಲಕರನ್ನು ರಸ್ತೆಯಿಂದ ತೆರಳದಂತೆ ನಿರ್ಬಂಧ ಹೇರುವ ದೃಶ್ಯಗಳೂ ಕಂಡು ಬರುತ್ತಿದೆ. ರಸ್ತೆಯಲ್ಲಿ ಮರ ಬಿದ್ದಲ್ಲಿ ಅದನ್ನು ತೆರವುಗೊಳಿಸಲೆಂದೇ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಇದ್ದರೂ, ಈ ವ್ಯಾಪಾರಿಗಳ ತಂಡ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿರುವುದು ಇದೀಗ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ಮರ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸುವ ಕಾಳಜಿ ಈ ವ್ಯಾಪಾರಿಗಳಲ್ಲಿದ್ದರೆ ತಮ್ಮ ಕೈಯಿಂದ ಹಣ ಖರ್ಚು ಮಾಡಿ ಮಾಡುವುದು ಬಿಟ್ಟು,
ರಸ್ತೆಯಲ್ಲಿ ಸಾಗುವ ವಾಹನ ಚಾಲಕರಿಂದ ಬಲತ್ಕಾರವಾಗಿ ಹಣ ವಸೂಲಿ ಮಾಡುವ ಅಗತ್ಯತೆ ಇರಲಿಲ್ಲ.
ತಮ್ಮ ವ್ಯಾಪಾರಕ್ಕೆ ನಷ್ಟವಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ರಸ್ತೆಯಲ್ಲಿ ಬಿದ್ದ ಮರವನ್ನು ಉಳಿದವರ ಖರ್ಚಿನಲ್ಲಿ ತೆರವುಗೊಳಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳೂ ಇದೀಗ ಕೇಳಿ ಬರುತ್ತಿದೆ. ಮೊದಲೇ ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಇಂಥಹ ಬಲತ್ಕಾರದ ವ್ಯವಸ್ಥೆಗಳಿಗೆ ವಿರೋಧ ವ್ಯಕ್ತವಾಗುವುದು ಸಾಮಾನ್ಯವಾಗಿದ್ದು,
ಒಂದು ವೇಳೆ ಪೆರಿಯಶಾಂತಿಯಲ್ಲೂ ಇಂಥಹ ವಿರೋಧ ವ್ಯಕ್ತವಾಗುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ಪೋಲೀಸ್ ಇಲಾಖೆ ಮನಗಾಣಬೇಕಿದೆ.
ಅಕ್ರಮವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಿ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿರುವ ಈ ವ್ಯಾಪಾರಿಗಳ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ಬರುತ್ತಿದ್ದು,
ಸೋಮವಾರದಂದು ಈ ವ್ಯಾಪಾರಿಗಳು ತೋರಿದ ವರ್ತನೆ ಮಾತ್ರ ಮಿತಿ ಮೀರಿದಂತಿತ್ತು.
ವಿಡಿಯೋಗಾಗಿ…