LATEST NEWS
ಸುಹಾಸ್ ಶೆಟ್ಟಿ ಹ**ತ್ಯೆಗೂ ಮುನ್ನ ಪಾರ್ಟಿ – ವಿದೇಶದಿಂದ ಹಣ ಸಂದಾಯದ ಶಂಕೆ

ಮಂಗಳೂರು, ಮೇ 5: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಗೆ ಸಂಬಂಧಿಸಿದಂತೆ ಈಗಾಗೇಲ 8 ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದರಲ್ಲಿ ಕೊಲೆಗೆ ಫಾಜಿಲ್ ಸಹೋದರ ಸುಪಾರಿ ನೀಡಿದ್ದ ವಿಚಾರ ಬಹಿರಂಗವಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಸುಫಾರಿ ನೀಡಲು ವಿದೇಶದಿಂದಲೂ ಹಣ ಕಳುಹಿಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಹತ್ಯೆ ನಡೆಸಲು ನೆರವು ನೀಡುವಂತೆ ಪ್ರಮುಖ ಆರೋಪಿ ಸಫ್ವಾನ್ ಅನೇಕರನ್ನು ಸಂಪರ್ಕಿಸಿದ್ದ. ಆ ಸಂದರ್ಭದಲ್ಲಿ ಜೈಲು, ಜಾಮೀನಿಗೆ ನೆರವಿಗಾಗಿ ಕೈಚಾಚಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಕೂಡಲೇ ಪೊಲೀಸರಿಗೆ ಶರಣಾಗುವ ಬಗ್ಗೆಯೂ ಹಂತಕರ ಗುಂಪು ಚರ್ಚೆ ನಡೆಸಿತ್ತು. ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತೇ ಎಂಬ ಬಲವಾದ ಅನುಮಾನ ಸೃಷ್ಟಿಯಾಗಿದೆ.

ಈ ನಡುವೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದ ಫೋಟೋ ಈಗ ಲಭ್ಯವಾಗಿದೆ. ಚಿಕ್ಕಮಗಳೂರಿನ (Chikkamagaluru) ಕಳಸದ ರೆಸಾರ್ಟ್ (Kalasa Resort) ಒಂದರಲ್ಲಿ ಏ.2 ರಂದು ಆರೋಪಿಗಳು ನೈಟ್ ಪಾರ್ಟಿ ಮಾಡಿದ್ದಾರೆ. ಹತ್ಯೆಗೆ ಸ್ಕೆಚ್ ರೂಪಿಸಲೆಂದೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕ್ಯಾಂಪ್ ಫೈರ್ ಹಾಕಿ ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.