LATEST NEWS
ಗ್ರಾಮಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಉಡುಪಿ ಡಿಸೆಂಬರ್ 22 : ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮಪಂಚಾಯತ್ ಗಳ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ರಾಜ್ಯದ ಒಟ್ಟು 5761 ಗ್ರಾಮಪಂಚಾಯತ್ ಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯುತ್ತಿದ್ದು, ಇಂದು ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3019 ಗ್ರಾಮಪಂಚಾಯತ್ ಗಳಿಗೆ ಮತದಾನ ನಡೆಯುತ್ತಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆಯ ಮತದಾನ ಆರಂಭವಾಗಿದ್ದು, ಮೊದಲ ಹಂತದಲ್ಲಿ ಒಟ್ಟು 616 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಜಿಲ್ಲೆಯ ಉಡುಪಿ, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರು ತಾಲೂಕಿನಲ್ಲಿ ಮತದಾನ ಆರಂಭವಾಗಿದೆ.

ಒಟ್ಟು 66 ಗ್ರಾ.ಪಂ.ಗಳ 402 ಕ್ಷೇತ್ರಗಳಲ್ಲಿ 1047 ಸ್ಥಾನಗಳಿಗೆ ಸದಸ್ಯರ ಆಯ್ಕೆಯಾಗಲಿದ್ದು, ಕಣದಲ್ಲಿ ಒಟ್ಟು 2349 ಅಭ್ಯರ್ಥಿಗಳು ಇದ್ದಾರೆ. ಇದರಲ್ಲಿ ಮೊದಲ ಹಂತದಲ್ಲಿ ಈಗಾಗಲೇ 63 ಮಂದಿ ಸದಸ್ಯರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಕೋಡಿ ಗ್ರಾ.ಪಂ.ನಲ್ಲಿ ಚುನಾವಣಾ ಬಹಿಷ್ಕಾರ ಹಾಕಲಾಗಿದೆ.