LATEST NEWS
ಕಳಪೆ ಆಹಾರ ಪಣಂಬೂರು ಬೀಚ್ ನಲ್ಲಿದ್ದ ಫಾಸ್ಟ್ ಪುಡ್ ಅಂಗಡಿಗಳ ಎತ್ತಂಗಡಿ….!!
ಮಂಗಳೂರು ಜನವರಿ 02: ಪಣಂಬೂರು ಬೀಚ್ ನಲ್ಲಿದ್ದ ಅನಧಿಕೃತ 6 ಫಾಸ್ಟ್ ಪುಡ್ ಅಂಗಡಿ ಸೇರಿದಂತೆ 9 ಅಂಗಡಿಗಳನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ಮುಚ್ಚಿಸಿದ್ದಾರೆ. ಪಣಂಬೂರು ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ‘ಸ್ವಚ್ಛ ಸುಂದರ ಕಿನಾರೆ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕಿನಾರೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬೀಚ್ ನ ಸುತ್ತಮುತ್ತ ಕಾರ್ಯಾಚರಿಸುತ್ತಿರುವ ಮಳಿಗೆಗಳ ಬಳಿಯೂ ಕಸ ರಾಶಿ ಬಿದ್ದಿದ್ದು ಕಂಡು ಮತ್ತಷ್ಟು ಗರಂ ಆದರು. ಈ ಮಳಿಗೆಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಅವುಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಮಳಿಗೆಗಳ ವರ್ತಕರು, ‘ನಾವು ಇಲ್ಲಿ 40 ವರ್ಷಗಳಿಂದ ಇದ್ದೇವೆ. ನಮ್ಮನ್ನು ದಿಢೀರ್ ತೆರವುಗೊಳಿಸು ವಂತಿಲ್ಲ’ ಎಂದು ವಾದಿಸಿದರು. ಇದಕ್ಕೆ ಸೊಪ್ಪುಹಾಕದೆ ಅಧಿಕಾರಿಗಳು ಮಳಿಗೆ ಗಳಲ್ಲಿದ್ದ ಪರಿಕರಗಳನ್ನು ತೆರವುಗೊಳಿಸಿದರು.
‘ಇಲ್ಲಿ ಸ್ವಚ್ಛತೆಯ ಕೊರತೆಯೊಂದಷ್ಟೇ ಈ ಮಳಿಗೆಗಳನ್ನು ಮುಚ್ಚಿಸಲು ಕಾರಣವಲ್ಲ. ಈ ಯಾವ ಮಳಿಗೆಯೂ ಪಾಲಿಕೆಯಿಂದ ಉದ್ದಿಮೆ ಪರವಾನಗಿಯನ್ನೇ ಹೊಂದಿಲ್ಲ. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಮಳಿಗೆಗಳನ್ನು ನಡೆಸಲಾಗುತ್ತಿದೆ. ತ್ಯಾಜ್ಯ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ. ಇದರಿಂದ ಸಮುದ್ರದ ಜೀವಿಗಳೂ ಮಾಲಿನ್ಯದ ಸಮಸ್ಯೆ ಎದುರಿಸುವಂತಾ ಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ತಿಂಡಿ ತಿನಿಸು ತಯಾರಿಸಲು ಕಲಬೆರಕೆಯ ಎಣ್ಣೆಗಳನ್ನು ಈ ಮಳಿಗೆಗಳು ಬಳಸುತ್ತಿವೆ. ಇಂತಹ ಮಳಿಗೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.