LATEST NEWS
ಕೊರೊನಾಗೆ ಕೊಡೇಸ್ ರಮ್ ಮದ್ದಂತೆ ! ಉಳ್ಳಾಲ ನಗರಸಭಾ ಸದಸ್ಯನ ವರಾತ !!
ಮಂಗಳೂರು, ಜು.16: “ಕೋಡೇಸ್ ರಮ್ಗೆ ಎಡ್ಡೆ ಮುಂಚಿ(ಕರಿಮೆಣಸು) ಸೇರಿಸಿ ಕುಡಿದರೆ ಕೊರೊನಾ ಹತ್ತಿರ ಸುಳಿಯಲ್ವಂತೆ. ಎರಡು ಮೊಟ್ಟೆಗೆ ಕರಿಮೆಣಸು ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ ರಮ್ ಜೊತೆ ಸೇವಿಸಿದರೆ ಕೊರೊನಾ ಹತ್ತಿರ ಸುಳಿಯಲ್ಲ..” ಹೀಗೆಂದು ಬಿಟ್ಟಿ ಉಪದೇಶ ನೀಡಿದ ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯ ಪಾನಕ ರವಿ ಯಾನೆ ರವಿಚಂದ್ರ ಗಟ್ಟಿಯವರ ಸೆಲ್ಫಿ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ನಗರಸಭಾ ಸದಸ್ಯನಾಗಿ ಜನಸಾಮಾನ್ಯರಿಗೆ ಇಂಥ ಸಲಹೆ ನೀಡಿದ್ದು ಎಷ್ಟು ಸರಿ ಅನ್ನುವ ಜಿಜ್ಞಾಸೆ ವ್ಯಕ್ತವಾಗಿದೆ.
ಈ ಹಿಂದೆ ಇದೇ ಪಾನಕ ರವಿ, ತನ್ನದೇ ಪಕ್ಷದ ಶಾಸಕ ಯು.ಟಿ ಖಾದರ್ ವಿರುದ್ಧ ಮಾತನಾಡಿದ ವೀಡಿಯೋ ವೈರಲ್ ಆಗಿತ್ತು. ಇದೀಗ ತಾನು ಕುಡಿಯುವುದಿಲ್ಲ ಎಂದು ಹೇಳಿಕೊಂಡು ಮದ್ಯ ತುಂಬಿದ ಬಾಟಲ್ ಹಿಡಿದು ಜನಸಾಮಾನ್ಯರಿಗೆ ಖೋಡೆಸ್ ರಮ್ ಕುಡಿಯಲು ಸಲಹೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ವಾಟ್ಸಪ್ ಗ್ರೂಪ್ಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ರವಿಚಂದ್ರ ಗಟ್ಟಿ ಅವರು ಹಾಸ್ಯ ಪ್ರಜ್ಞೆಯುಳ್ಳವರಾಗಿದ್ದು ತೊಕ್ಕೊಟ್ಟಿನಲ್ಲಿ ಪಾನಕ ರವಿ, ಪಾಂತೆ ರವಿ ಎಂದು ಹೆಸರಾದವರು. ಕಳೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಜಯ ಗಳಿಸಿದ್ದರು.
ಜನಪ್ರತಿನಿಧಿಯಾಗಿರುವ ರವಿ ಅವರು ಕೊಡೇಸ್ ರಮ್ ತುಂಬಿರುವ ಬಾಟಲಿ ಹಿಡಿದು ಕೊರೊನಾ ವಾಸಿಯಾಗಲು ಮದ್ಯಪಾನ ಮಾಡಿ ಎಂದು ಪ್ರೇರೇಪಿಸುವುದು ತಪ್ಪು ಸಂದೇಶ ರವಾನಿಸುವುದಲ್ಲದೆ, ಅಬಕಾರಿ ಕಾಯ್ದೆ ಪ್ರಕಾರ ಅಪರಾಧ. ಮಕ್ಕಳು ಈ ವೀಡಿಯೋ ನೋಡಿ ಕೊರೊನಾಕ್ಕೆ ಔಷಧವೆಂದು ಕುಡಿದರೆ ಗತಿ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಜಾಗತಿಕ ಮಹಾಮಾರಿ ಕೊರೊನಾವನ್ನು ತಮಾಷೆಗಾಗಿ ಉಪಯೋಗಿಸಿ ಜನರಿಗೆ ಮದ್ಯಪಾನ ಮಾಡಲು ಪ್ರೇರೇಪಿಸುವವರು ಜನಪ್ರತಿನಿಧಿಗಳಾಗಿ ಮುಂದುವರಿಯಲು ಅರ್ಹರಲ್ಲ ಎಂದು ಕೆಲವರು ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.