LATEST NEWS
ಪಕ್ಷಿಕೆರೆ ದುರಂತ ಪ್ರಕರಣ – ಕಾರ್ತಿಕ್ ಭಟ್ ತಾಯಿ ಮತ್ತು ಅಕ್ಕನಿಗೆ ನ್ಯಾಯಾಂಗ ಬಂಧನ
ಮಂಗಳೂರು ನವೆಂಬರ್ 12: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮುಲ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ದೂರಿನಂತೆ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಿದ್ದು, ನ್ಯಾಯಾಲಯ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪಕ್ಷಿಕೆರೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಿಯಾಂಕ ತಾಯಿ ನೀಡಿದ ದೂರಿನಂತೆ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ. ಸೋಮವಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಲ್ಲಿಂದ ಜೈಲಿನತ್ತ ಕರೆದೊಯ್ಯುತ್ತಿದ್ದಾಗಲೇ ಶ್ಯಾಮಲಾ ಮತ್ತು ಕಣ್ಮಣಿ ತಲೆತಿರುಗಿದ ರೀತಿ ನೆಲಕ್ಕೆ ಬಿದ್ದಿದ್ದು, ಅಸ್ವಸ್ಥರಾದ ರೀತಿ ನಟಿಸಿದ್ದಾರೆ. ಹೀಗಾಗಿ ಆರೋಪಿಗಳಿಬ್ಬರನ್ನೂ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮನೆಯ ಒಳಗಡೆ ಪೊಲೀಸರು ತಪಾಸಣೆ ನಡೆಸಿದ್ದು, ಕಾರ್ತಿಕ್ ಭಟ್ ಮತ್ತು ಪತ್ನಿ ಪ್ರಿಯಾಂಕಳ ಎರಡು ಮೊಬೈಲ್ ಹಾಗೂ ಎರಡು ಚೂರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಮನೆಯನ್ನು ಸೀಜ್ ಮಾಡಿದ್ದು, 2-3 ದಿನ ಯಾರು ಕೂಡ ವಾಸ ಇರಬಾರದು ಎಂದು ಸೂಚನೆ ನೀಡಿದ್ದಾರೆ.