LATEST NEWS
ಪಾಕ್ ಮಹಿಳೆ ಭಾರತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ!
ಲಖನೌ, ಡಿಸೆಂಬರ್ 31: ಪಾಕಿಸ್ತಾನದಿಂದ ವೀಸಾ ಪಡೆದು ಭಾರತಕ್ಕೆ ಬಂದ ಮಹಿಳೆಯೊಬ್ಬಳು ಇಲ್ಲಿನ ಗ್ರಾಮ ಪಂಚಾಯಿತಿ ಮುಖ್ಯಸ್ಥೆಯಾಗಿ ಆಯ್ಕೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ ಐದು ವರ್ಷಗಳ ನಂತರ ಆಕೆಯ ನಿಜ ಬಣ್ಣ ಬಯಲಾಗಿದೆ.
ಬಾನೋ ಬೇಗಂ ಹೆಸರಿನ ಮಹಿಳೆ 35 ವರ್ಷಗಳ ಹಿಂದೆ ಸಂಬಂಧಿಯೊಬ್ಬರ ಮದುವೆಗೆಂದು ಪಾಕಿಸ್ತಾನದಿಂದ ಉತ್ತರ ಪ್ರದೇಶದ ಇಟಾಕ್ಕೆ ಬಂದಿದ್ದರು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಆಕೆ ಇಲ್ಲಿನ ಅಖ್ತರ್ ಅಲಿ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾದ ಕಾರಣ ಆಕೆಯ ವೀಸಾ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೆ ಅದನ್ನೇ ದುರುಪಯೋಗ ಪಡಿಸಿಕೊಂಡ ಮಹಿಳೆ ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು, ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಕೆ 2015ರಲ್ಲಿಯೇ ಪಂಚಾಯಿತಿಗೆ ಆಯ್ಕೆಯಾಗಿದ್ದರು.
ಆ ಪಂಚಾಯಿತಿಯ ಅಧ್ಯಕ್ಷೆ ಶಹನಾಜ್ ಬೇಗಂ ಇತ್ತೀಚೆಗೆ ಮೃತರಾಗಿದ್ದಾರೆ. ಅದಾದ ನಂತರ ಬಾನೋ ಬೇಗಂನನ್ನು ಅಧ್ಯಕ್ಷರಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ. ಆದರೆ ಈ ವಿಚಾರವಾಗಿ ಅನೇಕ ಸದಸ್ಯರು ಪ್ರಶ್ನೆ ಎತ್ತಿದ್ದು, ನಂತರ ಆಕೆಯ ನಿಜ ಬಣ್ಣ ಹೊರಬಿದ್ದಿದೆ.
ಐದು ವರ್ಷಗಳ ಹಿಂದೆ ಪಂಚಾಯಿತಿ ಚುನಾವಣೆಗೆ ನಿಲ್ಲುವ ಸಲುವಾಗಿ ಮಹಿಳೆ ಅಕ್ರಮವಾಗಿ ಹಣ ಕೊಟ್ಟು ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ. ಅದನ್ನೇ ಬಳಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆಕೆಗೆ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಮಾಡಿಸಿಕೊಳ್ಳಲು ಸಹಾಯ ಮಾಡಿದವರನ್ನು ಪತ್ತೆ ಹಚ್ಚಿ, ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬಾನೋ ಪಂಚಾಯಿತಿ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿರುವುದಾಗಿ ಹೇಳಲಾಗಿದೆ.