Connect with us

LATEST NEWS

ದೇಶದಲ್ಲಿ ಉಗ್ರ ಚಟುವಟಿಕೆ ನಡೆಸಲು ಸ್ಥಳೀಯ ರೌಡಿಗಳನ್ನು ಬಳಸಿಕೊಳ್ಳಲು ಪಾಕಿಸ್ತಾನದ ಐಎಸ್ಐ ಪ್ಲಾನ್…

ನವದೆಹಲಿ, ಆಗಸ್ಟ್ 24: ದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಹಲವು ಪ್ರಯತ್ನಗಳನ್ನು ನಡೆಸಿದರೂ ವಿಫಲವಾಗಿರುವ ಪಾಕಿಸ್ತಾನದ ಐಎಸ್ಐ ಮತ್ತು ಉಗ್ರ ಸಂಘಟನೆಗಳು ಇದೀಗ ದೇಶದಲ್ಲಿರುವ ಸ್ಥಳೀಯ ಗ್ಯಾಂಗ್ ಸ್ಟಾರ್ ಗಳನ್ನು ಬಳಸಿಕೊಂಡು ಉಗ್ರ ದಾಳಿ ನಡೆಸಲು ಪ್ಲಾನ್ ಮಾಡುತ್ತಿದೆ ಎನ್ನುವ ಸ್ಟೋಟಕ ಮಾಹಿತಿ ಲಭ್ಯವಾಗಿದೆ. ಪಂಜಾಬ್ ನ ಗುಪ್ತಚರ ಇಲಾಖೆ ಈ ವಿಚಾರವನ್ನು ಬಹಿರಂಗಪಡಿಸಿದೆ.

ಉಗ್ರ ಚಟುವಟಿಕೆಗಳನ್ನು ನಡೆಸಿ ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವುದೇ ಈ ಸಂಘಟನೆಗಳ ಪ್ರಮುಖ ಉದ್ದೇಶವಾಗಿದೆ. ದೇಶದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಆದ ಹಿನ್ನಲೆಯಲ್ಲಿ ಪಾಕಿಸ್ತಾನ ಮೂಲದ ಐಎಸ್ಐ ಹಾಗೂ ಉಗ್ರ ಸಂಘಟನೆಗಳು ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ವಿಫಲವಾಗಿದೆ. ಅಲ್ಲದೆ ದೇಶದಲ್ಲಿ ಈಗಾಗಲೇ ಸಕ್ರಿಯವಾಗಿರುವ ಈ ಉಗ್ರ ಸಂಘಟನೆಗಳ ಸ್ಲೀಪರ್ ಸೆಲ್ ಗಳು ಇದೀಗ ತಮ್ಮ ಚಟುವಟಿಕೆಗಳನ್ನು ನಡೆಸಲು ಮುಂದಾಗದಿರುವುದೇ ಐಎಸ್ಐ ಈ ಹೊಸ ಪ್ಲಾನ್ ಬಳಸುತ್ತಿದೆ ಎನ್ನುವ ಮಾಹಿತಿಯನ್ನು ಚಂಡೀಘಡ್ ನ ಗುಪ್ತಚರ ಇಲಾಖೆ ದೇಶದ ಎಲ್ಲಾ ಗುಪ್ತಚರ ಇಲಾಖೆಗಳಿಗೆ ನೀಡಿದೆ.

ದೇಶದಲ್ಲಿರುವ ಉಗ್ರರ ಸ್ಲೀಪರ್ ಸೆಲ್ ಗಳು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದು, ಭದ್ರತಾ ಸಿಬ್ಬಂದಿಗಳಿಂದ ಹತ್ಯೆಯಾಗುವ ಭಯವೂ ಈ ಸೆಲ್ ನ ಸದಸ್ಯರಲ್ಲಿದೆ. ಈ ಕಾರಣಕ್ಕಾಗಿಯೇ ಸ್ಥಳೀಯವಾಗಿ ಇರುವ ಗ್ಯಾಂಗ್ ಸ್ಟಾರ್ ಗಳನ್ನು ಬಳಸಿಕೊಂಡು ಉಗ್ರ ದಾಳಿಗಳನ್ನು ನಡೆಸಲು ಪಾಕಿಸ್ತಾನದ ಉಗ್ರ ಸಂಘಟನೆಗಳು ಮುಂದಾಗಿದೆ.

ಈ ಮಾಹಿತಿಗೆ ಪೂರಕವಾಗಿ ಐಎಸ್ಐ ಪಂಜಾಬ್ ನ ಐವರು ಗ್ಯಾಂಗ್ ಸ್ಟಾರ್ ಗಳ ಜೊತೆಗೆ ಸಂಪರ್ಕ ಇರಿಸಿಕೊಂಡಿರುವ ಸಾಕ್ಷ್ಯವೂ ಲಭ್ಯವಾಗಿದೆ. ಈ ಗ್ಯಾಂಗ್ ಸ್ಟಾರ್ ಗಳು ಹಲವು ಕೊಲೆ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರಾಗಿದ್ದಾರೆ. ಈಗಾಗಲೇ ಈ ಗ್ಯಾಂಗ್ ಸ್ಟಾರ್ ಗಳ ಚಲನವಲನಗಳ ಮೇಲೆ ನಿಗಾ ಇರಿಸಿಕೊಂಡಿದ್ದ ಪೋಲೀಸರು ಐವರಲ್ಲಿ ಮೂವರನ್ನು ಬಂಧಿಸಿದ್ದು, ಪಂಜಾಬ್ ನ ವಿವಿಧ ಕಾರಾಗ್ರಹದಲ್ಲಿ ಇವರನ್ನು ಇರಿಸಲಾಗಿದೆ.

ಉಳಿದ ಇಬ್ಬರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೂ ಪೋಲೀಸರು ಬಲೆ ಬೀಸಿದ್ದಾರೆ. ಹಣಕ್ಕಾಗಿ ಯಾವುದೇ ಕೃತ್ಯ ಎಸಗಲು ಸಿದ್ಧವಿರುವ ರೌಡಿಗಳು ಹಾಗೂ ಗ್ಯಾಂಗ್ ಸ್ಟಾರ್ ಗಳನ್ನು ಬಳಸಿಕೊಂಡು ಐಎಸ್ಐ ದೇಶದಲ್ಲಿ ಉಗ್ರ ದಾಳಿ ನಡೆಸಲು ಪ್ಲಾನ್ ಮಾಡುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *