LATEST NEWS
ಮಲ್ಪೆ ಪರಿಸರದಲ್ಲಿ ಪಾಕಿಸ್ತಾನದ ಉಗ್ರ : ಲುಕ್ ಔಟ್ ನೋಟಿಸು ಜಾರಿ

ಮಲ್ಪೆ ಪರಿಸರದಲ್ಲಿ ಪಾಕಿಸ್ತಾನದ ಉಗ್ರ : ಲುಕ್ ಔಟ್ ನೋಟಿಸು ಜಾರಿ
ಉಡುಪಿ ಅಗಸ್ಟ್ 25: ಪಾಕಿಸ್ತಾನ ಮತ್ತು ಶ್ರೀಲಂಕಾದ ಮೂವರು ಉಗ್ರರು ತಮಿಳುನಾಡಿಗೆ ಆಗಮಿಸಿದ್ದಾರೆ ಎಂಬ ಕೇಂದ್ರ ಗುಪ್ತಚರ ಮಾಹಿತಿ ಹಿನ್ನಲೆಯಲ್ಲಿ ತಮಿಳು ನಾಡು ಹಾಗೂ ಕೇರಳ ಕರಾವಳಿ ತೀರದಲ್ಲಿ ಭಾರಿ ಕಟ್ಟೇಚ್ಚರವಹಿಸಲಾಗಿದೆ. ಈ ನಡುವೆ ಒರ್ವ ಪಾಕಿಸ್ತಾನದ ಉಗ್ರ ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಬಂದಿರುವ ಶಂಕೆ ಇದೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ, ಕರಾವಳಿ ಕಾವಲುಪಡೆಗೆ ನೀಡಿದೆ
ಉಡುಪಿ ಮಲ್ಪೆ ಕರಾವಳಿ ಪೊಲೀಸರು ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇರುವುದರಿಂದ ಅನುಮಾನಸ್ಪದ ವ್ಯಕ್ತಿಗಳು, ಇವರ ಚಹರೆ, ಚಲನವಲನ ಕಂಡುಬಂದಲ್ಲಿ ಕೂಡಲೆ ಕರಾವಳಿ ಕಾವಲು ಪೊಲೀಸ್ 0820-2538299ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕರಾವಳಿ ಕಾವಲು ಪಡೆ ಪೊಲೀಸರು ಪಾಕಿಸ್ತಾನದ ಉಗ್ರನ ಚಿತ್ರ ಹಾಗೂ ವಿವರಗಳನ್ನೊಳಗೊಂಡಿರುವ ನೋಟಿಸ್‌ಗಳನ್ನು ಮಲ್ಪೆ ಬಂದರು, ಪಡುಕೆರೆ ಬೀಚ್, ಕೆಮ್ಮಣ್ಣು, ಹೂಡೆ ಪ್ರದೇಶಗಳಲ್ಲಿ ಅಂಟಿಸಿದ್ದಾರೆ.
6 ಜನ ಉಗ್ರರಲ್ಲಿ ಒಬ್ಬ ಪಾಕಿಸ್ತಾನದ ಉಗ್ರನಾಗಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಲಾಗಿದೆ. ಶಂಕಿತರು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಇದೇವೇಳೆ ನಗರದ ಪ್ರಮುಖ ಸ್ಥಳಗಳು, ಬಂದರು ಹಾಗೂ ಪ್ರವಾಸಿ ತಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಪೊಲೀಸ್ ಪ್ರಕಟಣೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಉಡುಪಿ, ಮಲ್ಪೆ ಪರಿಸರದಲ್ಲಿ ಉಗ್ರರು ನುಸುಳಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿವೆ.