KARNATAKA
ಪಹಲ್ಗಾಮ್ ಉಗ್ರರ ಗುಂಡಿನ ದಾಳಿ – ಇಬ್ಬರು ಕನ್ನಡಿಗರು ಸೇರಿ 28ಕ್ಕೂ ಅಧಿಕ ಮಂದಿ ಬಲಿ

ಕಾಶ್ಮೀರ ಎಪ್ರಿಲ್ 22: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30ಕ್ಕೂ ಅಧಿಕ ಮಂದಿ ಸಾವನಪ್ಪಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೃತಪಟ್ಟವರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೇ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಕುದುರೆ ಮೇಲೆ ಕುಳಿತು ಪ್ರವಾಸಿಗರು ಸಮಯ ಕಳೆಯುತ್ತಿದ್ದ ವೇಳೆ ಸೇನಾ ಸಮವಸ್ತ್ರ ಧರಿಸಿ ಬಂದ ಭಯೋತ್ಪಾದಕರು, ಪ್ರವಾಸಿಗರನ್ನು ಮಾತನಾಡಿಸುವ ನೆಪದಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಬಲಿಯಾಗಿದ್ದಾರೆ. ಮೃತರನ್ನು ಹಾವೇರಿಯ ರಾಣೆಬೆನ್ನೂರು ಮೂಲದ ಭರತ್ ಭೂಷಣ್ ಎಂದು ಗುರುತಿಸಲಾಗಿದೆ. ಭರತ್ ಅವರು ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರ ಅಳಿಯನ ಸ್ನೇಹಿತ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ದಾಳಿಯಲ್ಲಿ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ಎಂಬವರು ಸಾವಿಗೀಡಾಗಿದ್ದರು.

ಲಷ್ಕರ್-ಇ-ತೊಯ್ಬಾದ ಮುಂಚೂಣಿ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.