FILM
‘ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’; ವಿವಾದದ ಕಿಡಿ ಹೊತ್ತಿಸಿದ ಸೋನು ನಿಗಮ್

ಬೆಂಗಳೂರು, ಮೇ 02: ಗಾಯಕ ಸೋನು ನಿಗಮ್ ಅವರು ವಿವಾದಿಂದ ಆಗಾಗ ಸುದ್ದಿ ಆಗುತ್ತಾರೆ. ಈಗ ಅವರು ಕನ್ನಡಕ್ಕೆ ಅವಮಾನ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ‘ಪಹಲ್ಗಾಮ್ ದಾಳಿಯಾಗಿದ್ದು ಕನ್ನಡದಿಂದಲೇ’ ಎಂಬರ್ಥ ಬರೋ ರೀತಿಯಲ್ಲಿ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಕಾಲೇಜು ಒಂದರ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದರು. ಅದು ಸಾಮಾನ್ಯ ಕೂಡ. ಸೋನು ಎಲ್ಲೇ ಹೋದರೂ ಕನ್ನಡ ಹಾಡು ಹೇಳುವ ಬಗ್ಗೆ ಒತ್ತಾಯ ಬರುತ್ತದೆ. ಆದರೆ, ಸೋನು ಇಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಅವರು, ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

‘ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನು ಹಾಡಿರುತ್ತೇನೆ’ ಎಂದ ಸೋನು ನಿಗಮ್, ಆ ಬಳಿಕ ಈ ರೀತಿ ಹೇಳಿದ್ದಾರೆ.
ಕಲಾವಿದರು, ಗಾಯಕರು ಎಲ್ಲರೂ ಎಲ್ಲಾ ಸಂದರ್ಭದಲ್ಲಿ ಒಂದೇ ರೀತಿ ಇರುತ್ತಾರೆ ಎಂದು ಹೇಳೋಕೆ ಸಾಧ್ಯವಾಗುವುದಿಲ್ಲ. ಅವರುಗಳು ಅವರದ್ದೇ ಆದ ಒತ್ತಡದಲ್ಲಿ ಇರುತ್ತಾರೆ. ಇಂಥ ಸಂದರ್ಭದಲ್ಲಿ ಈ ರೀತಿ ಕೇಳಿದಾಗ ಅವರಿಗೆ ಕಿರಿಕಿರಿ ಅನ್ನಿಸಿರಬಹುದು. ಆದರೆ, ತಾಳ್ಮೆ ಕಳೆದುಕೊಂಡು ಈ ರೀತಿ ಹೇಳಿಕೆ ನೀಡಿದ್ದು ಸರಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಪಹಲ್ಗಾಮ್ ದಾಳಿಗೂ ಕನ್ನಡ ಕನ್ನಡ ಎಂದು ಕೇಳುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಅನೇಕರದ್ದು. ಈ ಬಗ್ಗೆ ಸೋನು ನಿಗಮ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.