LATEST NEWS
ಸಿಎಎ ವಿರೋಧಿ ಪ್ರತಿಭಟನೆಗೆ ಪದ್ಮಶ್ರೀ ಪುರಸ್ಕೃತ ಹಾಜಬ್ಬರನ್ನು ಬಳಸಿಕೊಳ್ಳಲು ಹುನ್ನಾರ
ಸಿಎಎ ವಿರೋಧಿ ಪ್ರತಿಭಟನೆಗೆ ಪದ್ಮಶ್ರೀ ಪುರಸ್ಕೃತ ಹಾಜಬ್ಬರನ್ನು ಬಳಸಿಕೊಳ್ಳಲು ಹುನ್ನಾರ
ಮಂಗಳೂರು ಫೆಬ್ರವರಿ 19: ಕೇಂದ್ರ ಸರಕಾರದ ಸಿಎಎ ಹಾಗೂ ಎನ್.ಆರ್.ಸಿ ಕಾನೂನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರನ್ನೂ ಸೇರಿಸಿಕೊಳ್ಳಲಾಗುತ್ತಿದೆ ಎನ್ನುವ ಬಿಜೆಪಿ ಪಕ್ಷದ ಆರೋಪಗಳ ನಡುವೆಯೇ ಇಂಥಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಕಿತ್ತಳೆ ಹಣ್ಣನ್ನು ಮಾರಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಎಲ್ಲೆಲ್ಲೂ ಜನಜನಿತವಾದ ವಿಷಯ. ಇದೀಗ ಹಾಜಬ್ಬನವರನ್ನು ಎಲ್ಲಾ ಕಡೆಗಳಲ್ಲೂ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವೂ ನಡೆಯುತ್ತಿದೆ. ಜನರ ಪ್ರೀತಿಗೆ ಸೋತು ಹಾಜಬ್ಬರು ಎಲ್ಲಿ ಕರೆದರೂ ಇಲ್ಲ ಎನ್ನದೆ ಹೋಗುತ್ತಿದ್ದಾರೆ. ಆದರೆ ಹಾಜಬ್ಬರ ಇದೇ ಮುಗ್ದತೆಯನ್ನು ಬಳಸಿಕೊಂಡು ಸಂಘಟನೆಯೊಂದು ಇವರನ್ನು ಸಿಎಎ, ಎನ್.ಆರ್.ಸಿ ವಿರೋಧಿ ಪ್ರತಿಭಟನೆಗೂ ಅವರ ಅರಿವಿಗೆ ತರದೆ ಅತಿಥಿಯನ್ನಾಗಿ ಮಾಡಿದೆ.
ನಾಳೆ ಉಡುಪಿಯಲ್ಲಿ ನಡೆಯಲಿರುವ ಈ ಪ್ರತಿಭಟನೆಯನ್ನು ಒಂದು ಕಾರ್ಯಕ್ರಮ ಎಂದು ಹಾಜಬ್ಬರಿಗೆ ಮನವರಿಕೆ ಮಾಡಿ ಕಾರ್ಯಕ್ರಮದ ಉದ್ಘಾಟನೆಗೆ ತಾವು ಬರಬೇಕೆಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದರು.
ಆದರೆ ಮಾಧ್ಯಮಗಳ ಮೂಲಕ ನಾಳೆ ಉಡುಪಿಯಲ್ಲಿ ನಡೆಯಲಿರುವ ಕಾರ್ಯಕ್ರಮ ಸಿಎಎ ವಿರೋಧಿ ಪ್ರತಿಭಟನೆ ಎಂದು ತಿಳಿದ ತಕ್ಷಣ ಹಾಜಬ್ಬನವರು ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಸಂಘಟಕರಿಗೆ ತಿಳಿಸಿದ್ದಾರೆ.
ಸಾಮಾನ್ಯ ಜನರಂತಿರುವ ನನ್ನನ್ನು ಇಂಥ ವಿಷಯಗಳಲ್ಲಿ ಸಿಲುಕಿಸುವ ಕೆಲಸ ಯಾರೂ ಮಾಡಬಾರದೆಂದು ಅವರು ಮನವಿ ಮಾಡಿದ್ದಾರೆ. ಆ ಕಾನೂನಿನ ಬಗ್ಗೆ ನನಗೆ ಏನೂ ಗೊತ್ತಿಲ್ಲದಿರುವಾಗ ನನ್ನನ್ನು ಕಾರ್ಯಕ್ರಮ ಉದ್ಘಾಟನೆಗೆ ಕರೆದಿರುವ ಹಿಂದಿನ ಉದ್ಧೇಶ ಏನೆಂದು ನನಗೆ ತಿಳಿದಿಲ್ಲ ಎಂದು ಹಾಜಬ್ಬ ಹೇಳಿಕೊಂಡಿದ್ದಾರೆ.
ತನ್ನದೇ ಸಾಮರ್ಥ್ಯದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿಕೊಂಡಿರುವ ಹಾಜಬ್ಬನವರಿಗೆ ಶಿಕ್ಷಣದ ವಿಚಾರ ಬಿಟ್ಟರೆ ಬೇರೆ ಯಾವುದೂ ತಿಳಿದಿಲ್ಲ. ಇಂಥ ವ್ಯಕ್ತಿಯನ್ನು ವಿವಾದಾತ್ಮಕ ವಿಷಯಗಳಲ್ಲಿ ಸಿಲುಕಿಸುವ ಯತ್ನ ಉಡುಪಿಯ ಸಂಘಟನೆಗಳಿಂದ ನಡೆದಿರುವುದು ಖಂಡನೀಯ ವಿಚಾರವೂ ಆಗಿದೆ.