LATEST NEWS
ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತನಿಗೆ ಒಲಿದು ಬಂದ ಪ್ರದ್ಮಶ್ರೀ ಗೌರವ
ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತನಿಗೆ ಒಲಿದು ಬಂದ ಪ್ರದ್ಮಶ್ರೀ ಗೌರವ
ಮಂಗಳೂರು ಜನವರಿ 25: ಪ್ರತಿವರ್ಷದಂತೆ ಪದ್ಮಪ್ರಶಸ್ತಿಯಲ್ಲಿ ಈ ಬಾರಿಯೂ ಹಲವಾರು ಎಲೆ ಮರೆಕಾಯಿಯಂತಿರುವ ಸಾಧಕರನ್ನು ಕೇಂದ್ರ ಸರಕಾರ ಗುರುತಿಸಿದ್ದು, ದಕ್ಷಿಣಕನ್ನಡ ಜಿಲ್ಲೆಯ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.
ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.
ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಈ ಹಿನ್ನೆಲೆಯಲ್ಲಿಯೇ ತನ್ನೂರಿನ ಮಕ್ಕಳಿಗೆ ಶಾಲೆ ತೆರೆಯಲು ಕಚೇರಿಯಿಂದ ಕಚೇರಿಗೆ ಅಲೆದು ಶಾಲೆ ನಿರ್ಮಾಣ ಮಾಡಿದ್ದರು. ಅಕ್ಷರ ಸಂತ ಹಾಜಬ್ಬ ಕಳೆದ 20 ವರ್ಷಗಳಿಂದ ದಕ್ಷಿಣ ಕನ್ನಡದ ಕೊಣಾಜೆ ಸಮೀಪದ ಹರೇಕಳ ನ್ಯೂ ಪಡ್ಪು ಗ್ರಾಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ವಿಶೇಷವೆಂದರೆ ತನಗಿಲ್ಲದ ಶಿಕ್ಷಣ ತನ್ನ ಊರಿನ ಮಕ್ಕಳಿಗೆ ಸಿಗಬೇಕು ಎನ್ನುವ ಮಹದಾಸೆಯಿಂದ ಕಿತ್ತಳೆ ಮಾರುತ್ತಿದ್ದ ಹರೇಕಳ ಹಾಜಬ್ಬ, ಕಿತ್ತಳೆ ಮಾರಿ ಜೀವನ ಸಾಗಿಸಿ ಉಳಿದ ಹಣದಿಂದಲೇ ಅಂಗನವಾಡಿ ಆರಂಭಿಸುವ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
ವಿಚಿತ್ರವೆಂದರೇ ಕೊಣಾಜೆ ವಿಶ್ವವಿದ್ಯಾನಿಲಯದ ಪಕ್ಕದಲ್ಲೇ ಒಬ್ಬ ಅಕ್ಷರ ಸಂತ ಇದ್ದರೂ ಕೂಡ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲಿಲ್ಲ. ಇಡೀ ದೇಶವೆ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದರೂ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಮನಸ್ಸಾಗಲಿಲ್ಲ. ಆದರೆ ಕೇಂದ್ರ ಸರಕಾರ ಅಕ್ಷರ ಸಂತನನ್ನು ಹುಡುಕಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದು, ಪದ್ಮಶ್ರೀ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ.