FILM
‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ‘ಆಸ್ಕರ್’ ಪ್ರಶಸ್ತಿ
ತಮ್ಮ ಮೊದಲ ನಿರ್ದೇಶನದ ಕಿರುಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ ತಮಿಳಿನ ಕಾರ್ತಿಕಿ ಗೊನ್ಸಾಲ್ವೆಸ್, ಭಾರತಕ್ಕೆ ಘೋಷಣೆಯಾದ ಮೊದಲ ಪ್ರಶಸ್ತಿ ಇದಾಗಿತ್ತು. ಹಾಗಾಗಿ ಈ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಇಡೀ ಭಾರತವೇ ಸಂಭ್ರಮಿಸಿತು. ಸಾಕುವ ಆನೆ ಮರಿಗಳ ಕಥೆಯನ್ನು ಹೊಂದಿರುವ ‘ದಿ ಎಲಿಫೆಂಟ್ ವಿಸ್ಪರರ್ಸ್’ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ತಮಿಳು ನಾಡಿನ ಮುದಮಲೈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಕುಟುಂಬವೊಂದರ ಕಥೆಯೂ ಇದರಲ್ಲಿದೆ. ತಮಿಳು ನಾಡಿನ ಮೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ಬೆಳೆದ ರಘು ಎನ್ನುವ ಅನಾಥ ಆನೆ ಮರಿ ನಡುವೆ ಬೆಳೆದ ಬಾಂಧವ್ಯವನ್ನು ಭಾವನಾತ್ಮಕವಾಗಿ ಸೆರೆ ಹಿಡಿದಿದ್ದಾರೆ ನಿರ್ದೇಶಕರು.
41 ನಿಮಿಷಗಳ ಸಾಕ್ಷ್ಯಚಿತ್ರ ಇದಾಗಿದ್ದು, ಇಡೀ ಕಿರುಚಿತ್ರ ಕಾಡು ಮತ್ತು ಕಾಡಿನ ಸುತ್ತಮುತ್ತಲು ನಡೆಯುತ್ತದೆ. ಆನೆಮರಿಯ ಕಥೆಯ ಜೊತೆಗೆ ನೈಸರ್ಗಿಕ ಸೌಂದರ್ಯವನ್ನು ಮೊಗೆದು ಮೊಗೆದು ಕೊಟ್ಟಿದ್ದಾರೆ ನಿರ್ದೇಶಕರು. ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿರ್ದೇಶಕರು ಮೂಲತಃ ತಮಿಳುನಾಡಿನ ಊಟಿಯವರು. ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಅನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್ ಗಳಲ್ಲಿ ಕೆಲಸ ಮಾಡಿದ ಅನುಭವವೂ ಇವರದ್ದು.
ಆಸ್ಕರ್ ಪ್ರಶಸ್ತಿಯನ್ನು ಪಡೆದು ಮಾತನಾಡಿರುವ ಕಾರ್ತಿಕೆ, ಮೊದಲ ತಮ್ಮ ಆಸ್ಕರ್ ಪ್ರಶಸ್ತಿಯನ್ನು ತಾಯ್ನೆಲಕ್ಕೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಅರಣ್ಯ ಮತ್ತು ಕಾಡು ಪ್ರಾಣಿಗಳ ಮಹತ್ವವನ್ನು ಸಾರುವ ಪ್ರತಿಯೊಬ್ಬರಿಗೂ ಈ ಗೌರವ ಸಂದಿದೆ ಎಂದು ಮಾತನಾಡಿದ್ದಾರೆ.