Connect with us

    DAKSHINA KANNADA

    ಕೇಬಲ್ ಗಳಿಂದ ಅನಾಹುತ ಸಂಭವಿಸಿದರೆ ಅಪರೇಟರ್ ಗಳೇ ನೇರ ಹೊಣೆ

    ಮಂಗಳೂರು, ಆಗಸ್ಟ್ 07:  ಮೆಸ್ಕಾಂ ಮಂಗಳೂರು ವಿಭಾಗದಲ್ಲಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಟಿವಿ/ ಇಂಟರ್ನೆಟ್ /ಒಎಫ್ ಸಿ ಕೇಬಲ್ ಗಳಿಂದ  ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಕೇಬಲ್ ಆಪರೇಟರ್ ಗಳ ಸಭೆಯನ್ನು ನಡೆಸಲಾಯಿತು.

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು, ಸ್ಥಳೀಯ ಕೇಬಲ್ ಆಪರೇಟರ್ ಗಳು ಮೆಸ್ಕಾಂನ ವಿದ್ಯುತ್ ಕಂಬಗಳಲ್ಲಿ ಕೇಬಲ್ ಗಳನ್ನು ಸುರುಳಿ ಸುತ್ತಿಕೊಂಡು, ತೀರಾ ಕೆಳಮಟ್ಟದಲ್ಲಿ ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾಯಕಾರಿ ಆಗಬಹುದಾದ ರೀತಿಯಲ್ಲಿ ಎಳೆದಿರುವುದನ್ನು ಗಮನಿಸಿ ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರು ಮೆಸ್ಕಾಂ ಗೆ ದೂರುಗಳನ್ನು ನೀಡಿರುವ ಹಿನ್ನಲೆಯಲ್ಲಿ ಕೇಬಲ್ ಆಪರೇಟರ್ ಗಳಿಗೆ ಈ ಬಗ್ಗೆ ತುರ್ತಾಗಿ ಸರಿಪಡಿಸಲು/ತೆರವುಗೊಳಿಸಲು ಸೂಚಿಸಲಾಯಿತು.  ಅಪಾಯಕಾರಿ ಸ್ಥಿತಿಯಲ್ಲಿರುವ ಕೇಬಲ್ ಗಳನ್ನು ಸರಿಪಡಿಸಲು ಮೆಸ್ಕಾಂ ಸಹಕಾರ ನೀಡುವುದಾಗಿ  ತಿಳಿಸಲಾಯಿತು.

    ಅಲ್ಲದೆ ಮುಂದಿನ ದಿನಗಳಲ್ಲಿ ಈ ಕೇಬಲ್ ಗಳಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದಲ್ಲಿ ಸಂಬಂಧಿಸಿದ ಕೇಬಲ್ ಆಪರೇಟರ್ ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಲಾಯಿತು. ಹಾಗೂ ಮುಂದಕ್ಕೆ ಯಾವುದೇ ಹೊಸ ಕೇಬಲ್ ಗಳನ್ನು ಎಳೆಯಲು ಹಾಗೂ ನವೀಕರಣಕ್ಕೆ ಮಹಾನಗರ ಪಾಲಿಕೆಯ ನಿರಾಕ್ಷೇಪಣಾ ಪತ್ರ ಪಡೆಯಲು ಮಹಾನಗರ ಪಾಲಿಕೆಯು ಸೂಚಿಸಿದ್ದು ಈ ಬಗ್ಗೆ ನಿರಾಕ್ಷೇಪಣಾ ಪತ್ರ ಮೆಸ್ಕಾಂ ಅನುಮತಿಗೆ ಅಗತ್ಯ ಎಂದು  ತಿಳಿಸಲಾಯಿತು. ಸಭೆಯಲ್ಲಿದ್ದ ಕೇಬಲ್ ಕೇಬಲ್ ಆಪರೇಟರ್ ಗಳು ಈ ವಿಚಾರಕ್ಕೆ ಸ್ಪಂದಿಸಿ ಎಲ್ಲಾ ಕೇಬಲ್ ಆಪರೇಟರ್ ಗಳು ಸಮನ್ವಯದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿಯಾಗಿ ಎಳೆದಿರುವ ಕೇಬಲ್ ಗಳನ್ನು ಮೆಸ್ಕಾಂ ಇಲಾಖೆಯ ನಿಯಮಾವಳಿಗಳಂತೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಈ ಸಭೆಯು ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಲೋಹಿತ್ ಬಿ ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಭೆಯಲ್ಲಿ ಮನಪಾ ವ್ಯಾಪ್ತಿಯ ಮೆಸ್ಕಾಂನ ಅತ್ತಾವರ, ಮಣ್ಣಗುಡ್ಡ ಮತ್ತು ಕುಲಶೇಖರ ಉಪ ವಿಭಾಗ ಅಧಿಕಾರಿಗಳಾದ ಚಂದ್ರಶೇಖರ್ ಪೂಜಾರಿ, ವಸಂತ್ ಕುಮಾರ್, ಸತೀಶ್ ಮತ್ತು ವಿಭಾಗದ ಅಧಿಕಾರಿಗಳಾದ ಸೈಯದ್ ರೆಹಮಾನ್ ಮತ್ತು ಶಾಂತನಂದ್ ಹಾಗೂ ಕೇಬಲ್ ಆಪರೇಟರ್ ಗಳು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply