Connect with us

    LATEST NEWS

    ತಿರುಪತಿಯಲ್ಲಿ ಹಿಂದುಗಳಿಗಷ್ಟೇ ಕೆಲಸ; 24 ಸದಸ್ಯರನ್ನು ಒಳಗೊಂಡ ಸಮಿತಿ ರಚನೆ

    ಹೈದರಾಬಾದ್: ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರದ ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲರೂ ಹಿಂದುಗಳೇ ಆಗಿರಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ನೂತನ ಅಧ್ಯಕ್ಷ ಬಿ.ಆರ್.ನಾಯ್ಡು ಆದೇಶ ಮಾಡಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

    ಒಂದು ವೇಳೆ ಬೇರೆ ಧರ್ಮದವರು ಉದ್ಯೋಗದಲ್ಲಿದ್ದರೆ ಅವರನ್ನು ಸರ್ಕಾರದ ಇತರ ಇಲಾಖೆಗಳಿಗೆ ಕಳಿಸಬೇಕೇ ಅಥವಾ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್​ಎಸ್) ಅಡಿ ನಿವೃತ್ತಿಗೊಳಿಸಿ ಕಳಿಸಬೇಕೇ ಎಂಬ ಬಗ್ಗೆ ಆಂಧ್ರಪ್ರದೇಶ ಸರ್ಕಾರದ ಜತೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ. ತಿರುಮಲದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದುಗಳಾಗಿರಬೇಕು, ಆ ಬಗ್ಗೆಯೇ ನನ್ನ ಮೊದಲ ಪ್ರಯತ್ನ. ಅದರಲ್ಲಿ ಸಾಕಷ್ಟು ಎಡರುತೊಡರುಗಳಿದ್ದರೂ ಅದನ್ನು ನಿಭಾಯಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

    ಆಂಧ್ರಪ್ರದೇಶ ಸರ್ಕಾರ ಟಿಟಿಡಿಗೆ 24 ಸದಸ್ಯರನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಿದ್ದು, ಅದಕ್ಕೆ ನಾಯ್ಡು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಬಿ.ಆರ್.ನಾಯ್ಡು ಮಾಧ್ಯಮ ಕ್ಷೇತ್ರದವರಾಗಿದ್ದು, ಹಿಂದು ಭಕ್ತಿ ಚಾನೆಲ್ ಹಾಗೂ ತೆಲುಗಿನ ಸುದ್ದಿವಾಹಿನಿಯೊಂದನ್ನು ನಡೆಸುತ್ತಿದ್ದಾರೆ. ಶ್ರೀವೆಂಕಟೇಶ್ವರ ದೇವರ ಭಕ್ತರಾಗಿರುವ ನಾಯ್ಡು, ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡಿರುವುದು ತಮ್ಮ ಸೌಭಾಗ್ಯ ಎಂದೂ ಹೇಳಿಕೊಂಡಿದ್ದಾರೆ.

    ಜತೆಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಮತ್ತು ಎನ್​ಡಿಎ ಸರ್ಕಾರಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ. ಈ ಹಿಂದಿನ ವೈಎಸ್​ಆರ್ ಕಾಂಗ್ರೆಸ್ ಅವಧಿಯಲ್ಲಿ ತಿರುಮಲದಲ್ಲಿ ಸಾಕಷ್ಟು ಅಕ್ರಮಗಳು ಆಗಿದ್ದವು ಎಂದು ಆರೋಪಿಸಿರುವ ಅವರು, ದೇವಸ್ಥಾನದ ಪಾವಿತ್ರ್ಯವನ್ನು ರಕ್ಷಿಸಲಾಗುವುದು, ತಮ್ಮ ಅವಧಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply