Connect with us

    LATEST NEWS

    ಐದಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ವರದಿಯಾದ ಶಾಲೆ, ಕಾಲೇಜುಗಳಲ್ಲಿ ಆನ್‍ಲೈನ್ ತರಗತಿ – ಜಿಲ್ಲಾಧಿಕಾರಿ ಸೂಚನೆ

    ಮಂಗಳೂರು,ಜನವರಿ 19:- ಜಿಲ್ಲೆಯಲ್ಲಿ ಐದಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾದ ಶಾಲೆ ಕಾಲೇಜುಗಳಲ್ಲಿ ತರಗತಿಗಳನ್ನು ಬಂದ್ ಮಾಡಿ ಆನ್ ಲೈನ್ ತರಗತಿ ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.


    ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಮಾಣದ ಹಿನ್ನಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಅಲ್ಲಿನ ಮುಖ್ಯಸ್ಥರು ಅತ್ಯಂತ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು, ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಪಾತ್ರ ಅತ್ಯಂತ ಜವಬ್ದಾರಿಯುತದ್ದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

    ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತದೊಂದಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಕೈಜೋಡಿಸಬೇಕು, ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೂ, ಪರಿಸ್ಥಿತಿ ಅಷ್ಟು ಗಂಭೀರವಾಗಿಲ್ಲ, ಆದ ಕಾರಣ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಅಥವಾ ಭೌತಿಕ ತರಗತಿಗಳನ್ನು ರದ್ದುಗೊಳಿಸುವ ಅಗತ್ಯವಿಲ್ಲವೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಮುಂದಿನ ಒಂದು ವಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

    1. ಶಾಲಾ-ಕಾಲೇಜುಗಳಲ್ಲಿ ಜಾರಿಯಲ್ಲಿರುವ ಎಲ್ಲಾ ಕೋವಿಡ್ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
    2. ಶೈಕ್ಷಣಿಕ ತರಗತಿಗಳನ್ನು ಹೊರತುಪಡಿಸಿ ಯಾವುದೇ ಸಾಂಸ್ಕೃತಿಕ, ಕ್ರೀಡಾ ಮತ್ತಿತರ ಸಮೂಹ ಚಟುವಟಿಕೆಗಳಿಗೆ ಮುಂದಿನ ಆದೇಶದ ವರೆಗೆ ಅವಕಾಶವಿಲ್ಲ.
    3. 5 ಅದಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ಬಂದ ಸಂದರ್ಭದಲ್ಲಿ ಅಂತಹ ಶಾಲೆ ಅಥವಾ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ರದ್ದು ಪಡಿಸಿ ಆನ್‍ಲೈನ್ ತರಗತಿಗಳನ್ನು ನಡೆಸುವುದು.
    4. ಕೋವಿಡ್ ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಹಾಸ್ಟೆಲುಗಳಲ್ಲಿ ಅಥವಾ ಮನಗಳಲ್ಲಿ ಐಸೋಲೇಶನ್‍ಗೆ ಒಳಪಡಿಸುವುದು.
    5. ಎಂಟರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶೇಕಡ 100 ವ್ಯಾಕ್ಸಿನೇಷನ್ ಗುರಿ ತಲುಪಲು ಯತ್ನಿಸುವುದು.
    6. ಶಾಲೆಗಳಲ್ಲಿ ಕಡ್ಡಾಯವಾಗಿ ಹೆತ್ತವರ ಮತ್ತು ಶಿಕ್ಷಕರ ಸಭೆಯನ್ನು ಕರೆದು ಭೌತಿಕ ಅಥವಾ ಆನ್‍ಲೈನ್ ಕ್ಲಾಸ್‍ಗಳ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕು.
    7. ಶಾಲೆಗಳಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗಲು ಸಿದ್ಧರಿಲ್ಲದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಕಡ್ಡಾಯವಾಗಿ ವ್ಯವಸ್ಥೆ ಮಾಡಬೇಕು ಮತ್ತು ಅವಕಾಶ ಕಲ್ಪಿಸಿಕೊಡಬೇಕು.
    8. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಆನ್‍ಲೈನ್ ಕ್ಲಾಸುಗಳ ಬಗ್ಗೆ ದೂರುಗಳನ್ನು ಸಲ್ಲಿಸಲು ಮಕ್ಕಳ ಪೋಷಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆಯನ್ನು ತಕ್ಷಣದಿಂದಲೇ ಪ್ರಾರಂಭಿಸಬೇಕು.
    9. ಅಂತರರಾಜ್ಯ ವಿದ್ಯಾರ್ಥಿಗಳು ಹೆಚ್ಚಿರುವ ಕಾಲೇಜುಗಳಲ್ಲಿ ಮತ್ತು ಪಕ್ಕದ ರಾಜ್ಯದಿಂದ ದಿನನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆ ಕಾಲೇಜುಗಳಲ್ಲಿ ಕೋವಿಡ್ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತ ಸೂಚಿಸಲಾಯಿತು.
    10. ಕೆಲವು ಸ್ವಾಯತ್ತ ವಿದ್ಯಾಸಂಸ್ಥೆಗಳು ತಮ್ಮ ಸ್ಥಳೀಯ ಪರಿಸ್ಥಿತಿಯನ್ನು ಗಮನಿಸಿ ಭೌತಿಕ ತರಗತಿಗಳನ್ನು ರದ್ದುಪಡಿಸಿ ಆನ್‍ಲೈನ್ ತರಗತಿಗಳನ್ನು ನಡೆಸುತ್ತಿರುವುದನ್ನು ಗಮನಿಸಲಾಗಿದ್ದು, ಅದನ್ನು ಅಗತ್ಯವಿರುವಷ್ಟು ದಿನ ಮುಂದುವರಿಸುವಂತೆ ಸೂಚಿಸಲಾಯಿತು.
    11. ಇದೇ ಜ.24ರಂದು ಮತ್ತೋಮ್ಮೆ ಸಭೆ ಸೇರಿ ಪರಿಸ್ಥಿತಿಯ ಅವಲೋಕನ ನಡೆಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *