KARNATAKA
ರೈತನಿಗೆ ಕಣ್ಣೀರು ತಂದ ನೀರುಳ್ಳಿ, ಧಿಡೀರನೆ ಕುಸಿದ ಬೆಲೆ- ಕೆಜಿಗೆ 3-4 ರೂ. ಮಾರಾಟ..!
ದಾವಣಗೆರೆ : ಕೆಲ ತಿಂಗಳ ಹಿಂದೆ ಭಾರೀ ಏರಿಕೆಯಾಗಿ ಸದ್ದು ಮಾಡಿದ್ದ ಈರುಳ್ಳಿ ಬೆಲೆ, ಇದೀಗ ಢಿಡೀರನೆ ಭಾರೀ ಕುಸಿತ ಕಂಡಿದೆ. ಭೀಕರ ಬರಗಾಲದ ನಡುವೆಯೂ ರೈತರು ಈರುಳ್ಳಿ ಬೆಳದಿದ್ದರು.
ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬೆಲೆ ಕುಸಿತವಾಗಿದೆ. ಹೀಗಾಗಿ ರೈತರು ಈರುಳ್ಳಿ ಮಾರದೆ ದರ ಹೆಚ್ಚಳಕ್ಕಾಗಿ ಎರಡು ದಿನಗಳಿಂದ ಕಾಯ್ದು ಕುಳಿತಿರಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ. ದಾವಣಗೆರೆಯಲ್ಲಿ ಸಣ್ಣ ಗಾತ್ರದ ಈರುಳ್ಳಿ ಒಂದು ಕೆ.ಜಿಗೆ 1 ರೂ.ಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಳೆದಿದ್ದ ರೈತರು ಬೆಲೆ ಕುಸಿತದಿಂತ ಕಂಗಾಲಾಗಿದ್ದಾರೆ. ರಫ್ತು ನಿರ್ಬಂಧವನ್ನು ತೆರವುಗೊಳಿಸುವಂತೆ ಹುಬ್ಬಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆ ರೈತರು ಸಾಕಷ್ಟು ಈರುಳ್ಳಿ ಬೆಳೆದಿದ್ದು, ಮಾರಲು ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾರೆ. ಮಾರುಕಟ್ಟೆಗೆ ಒಂದೇ ದಿನ ಆರು ಸಾವಿರ ಚೀಲ ಈರುಳ್ಳಿ ಬಂದಿದೆ. ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ. ಇದರಿಂದ ರೈತರು ಆತಂಕಗೊಂಡಿದ್ದು, ಲಾರಿ ಬಾಡಿಗೆಯಾದರು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ದರ ಹೆಚ್ಚಾಗಬಹುದೆಂದು ರೈತರು ಕಳೆದ 2-3 ದಿನಗಳಿಂದ ಕಾಯ್ದು ಕುಳಿತಿದ್ದಾರೆ. 100 ಕೆ.ಜಿಯ ಚೀಲ ಈರುಳ್ಳಿಗೆ ಗರಿಷ್ಠ 1,400 ರೂ. ದೊರೆಯುತ್ತಿದೆ. ಅತ್ಯುತ್ತಮ ದಪ್ಪ ಈರುಳ್ಳಿ 1,200–1,300 ರೂ.ಗೆ ಮಾರಾಟವಾಗುತ್ತಿದ್ದರು, ಉತ್ತಮ ಮತ್ತು ಮಧ್ಯಮ ಗಾತ್ರದ ಈರುಳ್ಳಿ 600-1,100 ರೂ.ವರೆಗೆ ಮಾರಾಟವಾಗುತ್ತಿದೆ. ಇನ್ನು, ಸಣ್ಣ ಈರುಳ್ಳಿಯ ಚೀಲ ಕೇವಲ 100-200 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ, ಸಣ್ಣ ಈರುಳ್ಳಿಗೆ ಹಲವಡೆ ಕೆ.ಜಿಗೆ 1 ರೂ. ಮಾತ್ರವೇ ಇದೆ. ಪ್ರತಿ ಕ್ವಿಂಟಾಲ್ ಈರುಳ್ಳಿಗೆ ಕನಿಷ್ಟ 3,500 ರೂ. ಬೆಲೆ ಘೋಷಿಸುವಂತೆ ಆಗ್ರಹಿಸಿ ಈರುಳ್ಳಿ ಬೆಳೆಗಾರರು ಒತ್ತಾಯಿಸಿದ್ದಾರೆ.