LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ವಾರದ ಲಾಕ್ ಡೌನ್ ಆರಂಭ
ಮಂಗಳೂರು ಜುಲೈ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದ ಲಾಕ್ ಡೌನ್ ಇಂದು ಆರಂಭಗೊಂಡಿದ್ದು, ಬೆಳಿಗ್ಗೆ 8 ರಿಂದ 11 ರತನಕ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂದಿನಿಂದ ಮತ್ತೆ ಲಾಕ್ ಡೌನ್ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟೀವ್ ಸಂಖ್ಯೆಗಳ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಗೊಂಡಿದೆ.
ಇಂದಿನಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ನಿಶೇಧಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 8 ರಿಂದ 11 ರ ವರೆಗೆ ಸಮಯಾವಕಾಶವನ್ನು ನೀಡಲಾಗಿದ್ದು, ಆ ಬಳಿಕ ಸಂಪೂರ್ಣ ಬಂದ್ ಗೆ ಆದೇಶ ಹೊರಡಿಸಲಾಗಿದೆ. ಮೊದಲ ದಿನವಾದ ಗುರುವಾರ ಅಗತ್ಯ ಸಾಮಗ್ರಿಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಜನ ದಟ್ಟಣೆ ಇರಲಿಲ್ಲ. ಪುತ್ತೂರು ಪೇಟೆಯಲ್ಲಿ ಜನರ ಸಂಖ್ಯೆ ಅತ್ಯಂತ ವಿರಳವಾಗಿರುವುದು ಕಂಡು ಬಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶವನ್ನು ನೀಡಿದ್ದರೂ, ಜನ ಮಾತ್ರ ಮನೆಯಿಂದ ಹೊರಗಿಳಿದಿಲ್ಲ. ಪೇಟೆಯಾದ್ಯಂತ ಜನಸಂಖ್ಯೆ ಅತೀ ವಿರಳವಾಗಿದ್ದು, ಬೆರಳೆಣಿಕೆಯ ದಿನಸಿ ಅಂಗಡಿಗಳು ತೆರೆದಿವೆ.
ಪೆಟ್ರೋಲ್ ಬಂಕ್, ಮೆಡಿಕಲ್, ಹಾಲು ಹಾಗೂ ಪೇಪರ್ ಸ್ಟಾಲ್ ಗಳು ಎಂದಿನಂತೆ ಕಾರ್ಯಾಚರಿಸಲು ಅವಕಾಶವನ್ನು ನೀಡಲಾಗಿದೆ. ಬೆಳಿಗ್ಗೆ 11 ರ ವರೆಗೆ ಅಂಗಡಿ ತೆರೆಯಲು ಅವಕಾಶವಿದ್ದರೂ, ಕೆಲವರು ಮಾತ್ರ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿರುವುದು ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ.
ಲಾಕ್ ಡೌನ್ ಜೊತೆಗೆ ಮಳೆಯೂ ಜನರನ್ನು ರಸ್ತೆಗೆ ಇಳಿಯದಂತೆ ತಡೆದಿದೆ. ಇನ್ನು ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ವಾಹನಗಳ ವಿರುದ್ಧ ಕ್ರಮಕ್ಕೂ ಪೋಲೀಸರು ಮುಂದಾಗಿದ್ದಾರೆ. ಈ ಸಂಬಂಧ ಆಯಕಟ್ಟಿನ ಸ್ಥಳಗಳಲ್ಲಿ ಪೋಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಅನಗತ್ಯ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.